ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ತಲೆದಂಡಕ್ಕೆ ಮುಂದಾದ ಬಿಸಿಸಿಐ?
ಮಂಗಳವಾರ, 14 ಆಗಸ್ಟ್ 2018 (09:17 IST)
ಮುಂಬೈ: ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನದಿಂದ ಕೆಂಡಾಮಂಡಲವಾಗಿರುವ ಬಿಸಿಸಿಐ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿಗೆ ಈ ಬಗ್ಗೆ ವಿವರಣೆ ಕೇಳಲಿದೆ.
ಇನ್ನೊಂದು ಮೂಲಗಳ ಪ್ರಕಾರ ಕೋಚ್ ರವಿಶಾಸ್ತ್ರಿ ಪದಚ್ಯುತಿಗೂ ಬಿಸಿಸಿಐನಲ್ಲಿ ಒತ್ತಾಯ ಮೂಡಿಬರುತ್ತಿವೆ ಎನ್ನಲಾಗಿದೆ. ಮೂರನೇ ಟೆಸ್ಟ್ ಪಂದ್ಯದ ಫಲಿತಾಂಶ ನೋಡಿಕೊಂಡು ಕೋಚ್ ಮತ್ತು ನಾಯಕನಿಗೆ ಬಿಸಿಸಿಐ ಕ್ಲಾಸ್ ತೆಗೆದುಕೊಳ್ಳಲಿದೆ.
‘ದ.ಆಫ್ರಿಕಾ ಸರಣಿ ಸೋತಾಗ ಅಭ್ಯಾಸ ನಡೆಸಲು ಸಾಕಷ್ಟು ಸಮಯ ಸಿಕ್ಕಿರಲಿಲ್ಲ ಎನ್ನಲಾಗಿತ್ತು. ಅದನ್ನು ಒಪ್ಪಿಕೊಳ್ಳೋಣ. ಆದರೆ ಇಂಗ್ಲೆಂಡ್ ಸರಣಿಗೆ ತಯಾರಾಗಲು ಆಟಗಾರರಿಗೆ ಸಾಕಷ್ಟು ಸಮಯ ನೀಡಲಾಗಿತ್ತು. ಹಾಗಿದ್ದರೂ ಈ ಮಟ್ಟಿಗೆ ಹೀನಾಯ ಪ್ರದರ್ಶನ ತೋರಿದ್ದೇಕೆ’ ಎಂದು ಬಿಸಿಸಿಐ ಮೂಲಗಳು ಆಂಗ್ಲ ವಾಹಿನಿಯೊಂದರಲ್ಲಿ ಅಭಿಪ್ರಾಯ ಮಂಡಿಸಿದೆ.
ಕಳೆದ ಬಾರಿ ಇಂಗ್ಲೆಂಡ್ ಸರಣಿ ಸೋತಾಗ ಅಂದು ಕೋಚ್ ಆಗಿದ್ದ ಡಂಕನ್ ಫ್ಲೆಚರ್ ತಲೆದಂಡವಾಗಿತ್ತು. ಹೀಗಾಗಿ ಈ ಬಾರಿ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಸೋತರೆ ರವಿಶಾಸ್ತ್ರಿ ತಲೆದಂಡವಾದರೂ ಅಚ್ಚರಿಯಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.