ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಕಳೆದುಕೊಂಡ ಬೆನ್ನಲ್ಲೇ ಟೀಂ ಇಂಡಿಯಾ ಅಭಿಮಾನಿಗಳ ಆಕ್ರೋಶ ಮೇರೆ ಮೀರಿದೆ. ಮೊದಲು ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ರನ್ನು ಕಿತ್ತು ಹಾಕಬೇಕು ಆಗ ತಂಡ ಉದ್ದಾರವಾಗುತ್ತದೆ ಎಂದು ಕಿಡಿ ಕಾರಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಮೇಲೆ ಅಭಿಮಾನಿಗಳ ಭಾರೀ ನಿರೀಕ್ಷೆಯಿತ್ತು. ಆದರೆ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಈಗಾಗಲೇ ಸರಣಿ ಕಳೆದುಕೊಂಡಿರುವ ಭಾರತಕ್ಕೆ ಕೊನೆಯ ಪಂದ್ಯ ವೈಟ್ ವಾಶ್ ತಪ್ಪಿಸಿಕೊಳ್ಳಲು ಇರುವ ಹೋರಾಟವಾಗಲಿದೆ.
ಈ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮೇಲೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ತಲೆಬುಡವಿಲ್ಲದ ಲೆಕ್ಕಾಚಾರ, ತಂಡದ ಆಯ್ಕೆ, ಪ್ರಮುಖ ಆಟಗಾರರ ಅವಗಣನೆಯೇ ಈ ಪರಿಸ್ಥಿತಿಗೆ ಕಾರಣ ಎಂದಿದ್ದಾರೆ.
ಬಿಳಿ ಚೆಂಡಿನಲ್ಲಿ ಅತ್ಯುತ್ತಮ ನಾಯಕನನ್ನು ಕಿತ್ತು ಹಾಕಲಾಗಿದೆ, ದೇಶದಲ್ಲಿ ಅತ್ಯುತ್ತಮ ಕೋಚ್ ಗಳಿದ್ದರೂ ಅರ್ಹತೆಯಿಲ್ಲದವರನ್ನು ಕೋಚ್ ಮಾಡಲಾಗಿದೆ, ಅತ್ಯುತ್ತಮ ಆಲ್ ರೌಂಡರ್ ಗಳಿದ್ದರೂ ಅವರನ್ನು ಹೊರಗಿರಿಸಲಾಗಿದೆ, ಅತ್ಯುತ್ತಮ ಸ್ಪಿನ್ನರ್ ಗೂ ಅವಕಾಶ ನೀಡುತ್ತಿಲ್ಲ. ಇದೇ ಕಾರಣಕ್ಕೆ ಲಬುಶೇನ್, ಪ್ಯಾಟ್ ಕುಮಿನ್ಸ್, ಮ್ಯಾಕ್ಸ್ ವೆಲ್ ನಂತಹ ದಾಂಡಿಗರಿಲ್ಲದಿದ್ದರೂ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲಾಗುತ್ತಿಲ್ಲ. ಇದಕ್ಕೆಲ್ಲಾ ಗಂಭೀರ್ ಮತ್ತು ಅಗರ್ಕರ್ ಪ್ರತಿಷ್ಠೆ, ಪಕ್ಷಪಾತ ಧೋರಣೆಗಳೇ ಕಾರಣ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.