ಮುಂಬೈ: ಟೀಂ ಇಂಡಿಯಾದಲ್ಲಿ ಇತ್ತೀಚೆಗೆ ಕೆಲವು ಆಟಗಾರರು ರಾಷ್ಟ್ರೀಯ ತಂಡಕ್ಕಿಂತ ಐಪಿಎಲ್ ಮೇಲೆ ಹೆಚ್ಚು ವ್ಯಾಮೋಹ ಬೆಳೆಸಿಕೊಳ್ಳುತ್ತಿರುವುದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ.
ಇತ್ತೀಚೆಗೆ ಇಶಾನ್ ಕಿಶನ್ ಘಟನೆ ಇದಕ್ಕೆ ತಾಜಾ ಉದಾಹರಣೆ. ಮಾನಸಿಕ ಸುಸ್ತು ಎಂಬ ಕಾರಣ ನೀಡಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಇಶಾನ್ ಕಿಶನ್ ರಣಜಿ ಟ್ರೋಫಿ ಆಡುವಂತೆ ಕೋಚ್ ಸೂಚಿಸಿದರೂ ಕ್ಯಾರೇ ಎಂದಿರಲಿಲ್ಲ. ಹೀಗಾಗಿ ಅವರನ್ನು ಕಳೆದ ಕೆಲವು ಪಂದ್ಯಗಳಿಂದ ಹೊರಗಿಡಲಾಗಿದೆ. ಆದರೆ ರಣಜಿ ಟ್ರೋಫಿ ಆಡದ ಇಶಾನ್ ಐಪಿಎಲ್ ಗಾಗಿ ಈಗಲೇ ಸಿದ್ಧತೆ ಆರಂಭಿಸಿರುವುದು ಬಿಸಿಸಿಐ ಗಮನಕ್ಕೆ ಬಂದಿದೆ. ಇದೇ ಕಾರಣಕ್ಕೆ ಈಗ ಬಿಸಿಸಿಐ ಸಿಟ್ಟಾಗಿದ್ದು, ಇಂತಹ ಆಟಗಾರರಿ ತಕ್ಕ ಪಾಠ ಕಲಿಸಲು ಮುಂದಾಗಿದೆ.
ಬಿಸಿಸಿಐ ಗರಂ, ಆಟಗಾರರಿಗೆ ಕಠಿಣ ರೂಲ್ಸ್
ಇತ್ತೀಚೆಗೆ ಕೆಲವು ಕ್ರಿಕೆಟಿಗರು ರಾಷ್ಟ್ರೀಯ ತಂಡವನ್ನು ಕಡೆಗಣಿಸಿ ಜನವರಿಯಿಂದಲೇ ಐಪಿಎಲ್ ಗೆ ತಯಾರಿ ನಡೆಸುತ್ತಿರುವುದು ಬಿಸಿಸಿಐ ಸಿಟ್ಟಿಗೆ ಕಾರಣವಾಗಿದೆ. ರಾಷ್ಟ್ರೀಯ ತಂಡವನ್ನೂ ಕಡೆಗಣಿಸಿ ಫ್ರಾಂಚೈಸಿ ಕ್ರಿಕೆಟ್ ಗೆ ಒಲವು ತೋರುತ್ತಿರುವುದಕ್ಕೆ ಸಿಟ್ಟಾಗಿದೆ. ಇದೇ ಕಾರಣಕ್ಕೆ ಇನ್ನು ಮುಂದೆ ಆಟಗಾರರಿಗೆ ಕಠಿಣ ರೂಲ್ಸ್ ಜಾರಿಗೆ ತರಲು ಮುಂದಾಗಿದೆ. ಇನ್ನು ಮುಂದೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕಾದರೆ ಹಿರಿಯ ಆಟಗಾರನಾದರೂ ರಣಜಿಯಂತಹ ದೇಶೀಯ ಕ್ರಿಕೆಟ್ ಆಡಿ ಫಿಟ್ನೆಸ್ ಸಾಬೀತಪಡಿಸಿದರೆ ಮಾತ್ರ ರಾಷ್ಟ್ರೀಯ ತಂಡದ ಆಯ್ಕೆಗೆ ಅರ್ಹನಾಗಿರುತ್ತಾರೆ ಎಂದು ಕಠಿಣ ನಿಯಮ ಜಾರಿಗೆ ತರಲಿದೆ. ಕೇವಲ ಗಾಯಗೊಂಡು ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡ ಆಟಗಾರರನ್ನು ಮಾತ್ರ ಈ ಕಠಿಣ ನಿಯಮದಿಂದ ವಿನಾಯ್ತಿ ನೀಡಲಾಗುತ್ತದೆ.
ಉಳಿದಂತೆ ಇಶಾನ್ ನಂತೆ ಮಾನಸಿಕ ಸುಸ್ತು ಎಂಬಿತ್ಯಾದಿ ಕಾರಣ ನೀಡಿ ತಂಡದಿಂದ ಹೊರನಡೆದರೆ ರಣಜಿಯಂತಹ ದೇಶೀಯ ಕ್ರಿಕೆಟ್ ಆಡಲೇಬೇಕು ಎಂಬ ಕಡ್ಡಾಯ ನಿಯಮ ಜಾರಿಗೆ ಬರಲಿದೆ. ಈ ಬಗ್ಗೆ ಸದ್ಯದಲ್ಲೇ ಬಿಸಿಸಿಐ ಎಲ್ಲಾ ಆಟಗಾರರಿಗೂ ಸಂದೇಶ ಕಳುಹಿಸಲಿದೆ. ಈ ಮೂಲಕ ಗಾಯ, ಸುಸ್ತು ಎಂಬ ನೆಪದಲ್ಲಿ ರಾಷ್ಟ್ರೀಯ ತಂಡಕ್ಕೆ ಗೈರಾಗಿ ಐಪಿಎಲ್ ಗೆ ಜೈ ಎನ್ನುವ ಆಟಗಾರರಿಗೆ ಬಿಸಿಸಿಐ ತಕ್ಕ ಪಾಠ ಕಲಿಸಲು ಮುಂದಾಗಿದೆ.