ಮೂರನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಇಬ್ಬರು ಪದಾರ್ಪಣೆ

Krishnaveni K

ಬುಧವಾರ, 14 ಫೆಬ್ರವರಿ 2024 (09:11 IST)
ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಇಬ್ಬರು ಹೊಸ ಆಟಗಾರರಿಗೆ ಅವಕಾಶ ಸಿಗಲಿದೆ.

ಗಾಯದ ಗೂಡಾಗಿರುವ ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಆಡುತ್ತಿಲ್ಲ. ವಿರಾಟ್ ಕೊಹ್ಲಿ ಕೌಟುಂಬಿಕ ಕಾರಣಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ದೇಶೀಯ ಕ್ರಿಕೆಟ್ ನಲ್ಲಿ ಮಿಂಚಿದ ಬ್ಯಾಟಿಗ ಸರ್ಫರಾಜ್ ಖಾನ್ ಮತ್ತು ವಿಕೆಟ್ ಕೀಪರ್ ಧ್ರುವ ಜ್ಯುರೆಲ್ ಪದಾರ್ಪಣೆ ಮಾಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ವಿಕೆಟ್ ಕೀಪರ್ ಕೆಎಸ್ ಭರತ್ ಕಳೆದ ಎರಡು ಪಂದ್ಯಗಳಲ್ಲಿ ಆಡಿದ್ದರೂ ಕಳಪೆ ಫಾರ್ಮ್ ಪ್ರದರ್ಶಿಸಿದ್ದರು. ಹೀಗಾಗಿ ಅವರನ್ನು ಕಿತ್ತೊಗೆಯಬೇಕೆಂಬ ಕೂಗು ಕೇಳಿಬರುತ್ತಿತ್ತು. ಹೀಗಾಗಿ ಯುವ ಕ್ರಿಕೆಟಿಗ ಧ್ರುವ ಜ್ಯುರೆಲ್ ಗೆ ಅವಕಾಶ ಸಿಗಲಿದೆ. ಶ್ರೇಯಸ್ ಅಯ್ಯರ್ ಕೂಡಾ ಗಾಯದಿಂದಾಗಿ ಹೊರಬಿದ್ದಿರುವುದರಿಂದ ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಗೆ ಅವಕಾಶ ಸಿಗಲಿದೆ.

ನಿನ್ನೆ ಟೀಂ ಇಂಡಿಯಾ ಆಯ್ಕೆಯ ಅಭ್ಯಾಸ ಸೆಷನ್ ನಡೆಸಿತ್ತು. ಈ ಅಭ್ಯಾಸದ ವೇಳೆ ಬ್ಯಾಟಿಗ ಶುಬ್ಮನ್ ಗಿಲ್ ಪಾಲ್ಗೊಂಡಿರಲಿಲ್ಲ. ಗಿಲ್ ಕೂಡಾ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದರು. ಆದರೆ ಅವರು ಈಗ ಚೇತರಿಸಿಕೊಂಡಿದ್ದು ಮೂರನೇ ಟೆಸ್ಟ್ ನಲ್ಲಿ ಆಡಲಿದ್ದಾರೆ. ಹಾಗಿದ್ದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಅಭ್ಯಾಸ ನಡೆಸಲಿಲ್ಲ.

ನಾಳೆಯಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ರಾಜ್ ಕೋಟ್ ನಲ್ಲಿ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಸರಣಿ ಈಗಾಗಲೇ 1-1 ರಿಂದ ಸಮಬಲಗೊಂಡಿದ್ದು, ಉಳಿದ ಪಂದ್ಯಗಳಲ್ಲಿ ಯಾವುದೇ ತಂಡ ಸರಣಿ ಗೆಲ್ಲಬೇಕಾದರೆ ಇನ್ನೆರಡು ಪಂದ್ಯ ಗೆಲ್ಲಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ