ಮುಂಬೈ: ರಾಷ್ಟ್ರೀಯ ತಂಡಕ್ಕೆ ಮರಳಲು ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ಗೆ ಬಿಸಿಸಿಐ ಕೊನೆಯ ಅವಕಾಶ ನೀಡಿದೆ. ಜಾರ್ಖಂಡ್ ಪರ ಕೊನೆಯ ರಣಜಿ ಪಂದ್ಯವಾಡಲು ಸೂಚಿಸಿದೆ.
ಇತ್ತೀಚೆಗಷ್ಟೇ ಕೋಚ್ ದ್ರಾವಿಡ್ ಟೀಂ ಇಂಡಿಯಾಕ್ಕೆ ಮರಳಲು ಇಶಾನ್ ಸ್ವಲ್ಪ ಕ್ರಿಕೆಟ್ ಆಡಲೇಬೇಕು ಎಂದಿದ್ದರು. ಕೋಚ್ ಸಲಹೆಯನ್ನೂ ಪರಿಗಣಿಸದೇ ಇಶಾನ್ ರಣಜಿಯಲ್ಲಿ ಆಡುವುದನ್ನು ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಸ್ವತಃ ಬಿಸಿಸಿಐ ಇಶಾನ್ ಗೆ ದೇಶೀಯ ಕ್ರಿಕೆಟ್ ಆಡಲು ಕಟ್ಟುನಿಟ್ಟಿನ ಆದೇಶ ನೀಡಿದೆ ಎನ್ನಲಾಗಿದೆ.
ಈ ವಾರಂತ್ಯಕ್ಕೆ ರಾಜಸ್ಥಾನ್ ಮತ್ತು ಜಾರ್ಖಂಡ್ ನಡುವೆ ರಣಜಿ ಟ್ರೋಫಿ ಕೊನೆಯ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ತವರು ಜಾರ್ಖಂಡ್ ಪರ ಆಡುವಂತೆ ಇಶಾನ್ ಗೆ ಸೂಚನೆ ನೀಡಲಾಗಿದೆ. ಕಳೆದ ನವಂಬರ್ ನಿಂದ ಇಶಾನ್ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ.
ರಾಜ್ ಕೋಟ್ ಗೆ ತೆರಳುವ ಮೊದಲು ಕೋಚ್ ದ್ರಾವಿಡ್ ಗೆ ಮತ್ತೆ ಇಶಾನ್ ಕುರಿತು ಪ್ರಶ್ನೆ ಎದುರಾಗಿತ್ತು. ಇದಕ್ಕೆ ಮತ್ತೆ ದ್ರಾವಿಡ್ ಎರಡನೇ ಬಾರಿಗೆ ಇಶಾನ್ ಮೊದಲು ಕ್ರಿಕೆಟ್ ಆಡಬೇಕು. ದೇಶೀಯ ಕ್ರಿಕೆಟ್ ಅಂತಲ್ಲ, ಕ್ರಿಕೆಟ್ ಆಡಿದರೂ ಸಾಕು. ಆದರೆ ನಾವು ಅವರನ್ನು ಒತ್ತಾಯಿಸಲ್ಲ. ಆಯ್ಕೆ ಅವರದ್ದು ಎಂದಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಇಶಾನ್ ಗೆ ರಣಜಿ ಆಡಲು ಸೂಚಿಸಿದೆ. ಈಗಲಾದರೂ ಇಶಾನ್ ಸೂಚನೆ ಪಾಲಿಸುತ್ತಾರಾ ಎಂದು ಕಾದು ನೋಡಬೇಕಿದೆ.