Border Gavaskar Test: 23 ಎಸೆತ ಎದುರಿಸಿಯೂ ಶೂನ್ಯ, ದೇವದತ್ತ್ ಪಡಿಕ್ಕಲ್ ಟ್ರೋಲ್

Krishnaveni K

ಶುಕ್ರವಾರ, 22 ನವೆಂಬರ್ 2024 (10:10 IST)
Photo Credit: X
ಪರ್ತ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಶೋಚನೀಯ ಸ್ಥಿತಿ ಮುಂದುವರಿದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ಕಳೆದುಕೊಂಡು ಕೇವಲ 51 ರನ್ ಗಳಿಸಿದೆ.

ಈ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಕಣಕ್ಕಿಳಿದಿದ್ದಾರೆ. ಈ ಪೈಕಿ ಜೈಸ್ವಾಲ್ 8 ಎಸೆತ ಎದುರಿಸಿ ಶೂನ್ಯಕ್ಕೆ ನಿರ್ಗಮಿಸಿದರು. ಆಗ ಭಾರತದ ಸ್ಕೋರ್ ಕೇವಲ 5 ರನ್ ಆಗಿತ್ತು. ಇಂದು ಮೂರನೇ ಕ್ರಮಾಂಕದಲ್ಲಿ ಅವಕಾಶ ಪಡೆದು ಬಂದ ಕರ್ನಾಟಕ ಮೂಲದ ದೇವದತ್ತ್ ಪಡಿಕ್ಕಲ್ ಕೂಡಾ ಶೂನ್ಯಕ್ಕೆ ನಿರ್ಗಮಿಸಿದರು. ಅವರು ಇದಕ್ಕಾಗಿ ಬರೋಬ್ಬರಿ 23 ಎಸೆತ ಎದುರಿಸಿದರು.

23 ಎಸೆತ ಎದುರಿಸಿಯೂ ಶೂನ್ಯ ಸಂಪಾದಿಸಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪಡಿಕ್ಕಲ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಕೇವಲ ಐಪಿಎಲ್ ಅನುಭವ ಹೊಂದಿರುವವರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದರೆ ಇದೇ ಕತೆಯಾಗುತ್ತದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಇನ್ನು ವಿರಾಟ್ ಕೊಹ್ಲಿಯದ್ದೂ ಮತ್ತೊಮ್ಮೆ ಫ್ಲಾಪ್ ಶೋ. 12 ಎಸೆತ ಎದುರಿಸಿದ ಅವರು 5 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಹಾಗಿದ್ದರೂ ಇನ್ನೊಂದೆಡೆ ತಾಳ್ಮೆಯ ಆಟವಾಡುತ್ತಿದ್ದ ಕೆಎಲ್ ರಾಹುಲ್ ಭರವಸೆ ಹುಟ್ಟಿಸಿದ್ದರು. ಆದರೆ ಒಟ್ಟು 74 ಎಸೆತ ಎದುರಿಸಿದ ಅವರು 26 ರನ್ ಗಳಿಸುವಷ್ಟರಲ್ಲಿ ಔಟಾದರು. ಆಸೀಸ್ ನ ಹೇಝಲ್ ವುಡ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ 2 ವಿಕೆಟ್ ಕಬಳಿಸಿದ್ದಾರೆ.  ಇದೀಗ ಕ್ರೀಸ್ ನಲ್ಲಿ 10 ರನ್ ಗಳಿಸಿರುವ ರಿಷಭ್ ಪಂತ್ ಮತ್ತು 4 ರನ್ ಗಳಿಸಿರುವ ಧ್ರುವ್ ಜ್ಯುರೆಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ