ಮುಂಬೈ: ಹಿಟ್‌ಮ್ಯಾಟ್ ರೋಹಿತ್ ಶರ್ಮಾ ಅವರು ಬುಧವಾರ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅವರು ಭಾರತ ಟೆಸ್ಟ್ ತಂಡದ ನಾಯಕ ಕೂಡ ಆಗಿದ್ದರಿಂದ ಅವರಿಂದ ತೆರವಾದ ಸ್ಥಾನಕ್ಕೆ ಯಾರು ತುಂಬುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಸದ್ಯ ತಂಡದ ನಾಯಕತ್ವಕ್ಕಾಗಿ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಮತ್ತು ಯುವ ಆಟಗಾರ ಶುಭಮನ್ ಗಿಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಬೂಮ್ರಾ, ಗಿಲ್ ಜೊತೆಗೆ, ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಅವರ ಹೆಸರುಗಳೂ ಕೇಳಿ ಬರುತ್ತಿವೆ.
ದೀರ್ಘ ಸಮಯದಿಂದ ಲಯದಲ್ಲಿ ವಿಫಲರಾಗುತ್ತಿದ್ದ 38 ವರ್ಷದ ರೋಹಿತ್ ಟೆಸ್ಸ್ ಮಾದರಿಗೆ ದಿಢೀರ್ ವಿದಾಯ ಹೇಳಿದ್ದಾರೆ. 2024-25ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಕೇವಲ 1 ಪಂದ್ಯ ಗೆದ್ದಿತ್ತು. ಉಳಿದ ನಾಲ್ಕರಲ್ಲಿ ಒಂದು ಡ್ರಾ ಆದರೆ, ಉಳಿದ ಮೂರರಲ್ಲಿ ಸೋಲು ಎದುರಾಗಿತ್ತು. ಗೆದ್ದ ಒಂದು ಪಂದ್ಯದಲ್ಲಿ ತಂಡ ಮುನ್ನಡೆಸಿದ್ದು ಬೂಮ್ರಾ ಎಂಬುದು ವಿಶೇಷ. ಇದೇ ಕಾರಣಕ್ಕೆ ಬೂಮ್ರಾ ಹೆಸರು ಮುಂಚೂಣಿಯಲ್ಲಿದೆ.
ಆದರೆ, ಗಾಯದ ಸಮಸ್ಯೆಯ ಕಾರಣಕ್ಕೆ ಅವರು ದೀರ್ಘ ಸಮಯದವರೆಗೆ ನಾಯಕರಾಗಿ ಮುಂದುವರಿಯುವುದು ಅನುಮಾನ. ಅದೇ ಕಾರಣಕ್ಕೆ ಅವರಿಗೆ ಅವಕಾಶ ಕೈತಪ್ಪಬಹುದು ಎನ್ನಲಾಗುತ್ತಿದೆ.
ಭಾರತ ತಂಡವು ಜೂನ್- ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಆ ವೇಳೆ, ಬೂಮ್ರಾ ತಂಡ ಮುನ್ನಡೆಸಬೇಕು. ಶುಭಮನ್ ಗಿಲ್ ಉಪನಾಯಕರಾಗಿರಲಿ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಹೇಳಿದ್ದಾರೆ. ಈ ಸರಣಿಯೊಂದಿಗೆ ಭಾರತ ತಂಡ ಟೆಸ್ಟ್ ಚಾಂಪಿಯನ್‌ಷಿಪ್‌ನ ನೂತನ ಆವೃತ್ತಿಯ ಅಭಿಯಾನ ಆರಂಭಿಸಲಿದೆ.
ಕಾರ್ಯಭಾರ ನಿರ್ವಹಣೆ ದೃಷ್ಟಿಯಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಶುಭಮನ್ ಗಿಲ್ ಅವರತ್ತ ಮುಖ ಮಾಡುವ ಸಾಧ್ಯತೆ ಇದೆ. ಅವರು, ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡ ಮುನ್ನಡೆಸುತ್ತಿದ್ದಾರೆ.