2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ಗೆ ಮಾನ್ಯತೆ: ಈ ಸ್ಪರ್ಧೆಯಲ್ಲಾದರೂ ಭಾರತಕ್ಕೆ ಸಿಗುತ್ತಾ ಚಿನ್ನದ ಪದಕ

Sampriya

ಗುರುವಾರ, 10 ಏಪ್ರಿಲ್ 2025 (14:15 IST)
Photo Courtesy X
ನವದೆಹಲಿ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕೊನೆಗೂ ಕ್ರಿಕೆಟ್‌ಗೆ ಮಾನ್ಯತೆ ನೀಡಲಾಗಿದೆ. ಆದರೆ, ಆರು ತಂಡಗಳಿಗೆ ಮಾತ್ರ ಪ್ರವೇಶದ ಅವಕಾಶ ನೀಡಲಾಗಿದೆ.

128 ವರ್ಷಗಳ ನಂತರ 2028ರ ಲಾಸ್ ಏಂಜಲೀಸ್ ಕೂಟ ಮೂಲಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳುತ್ತಿದೆ. ಪ್ಯಾರಿಸ್‌ನಲ್ಲಿ ನಡೆದ 1900ರ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕೊನೆಯ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಎರಡು ದಿನಗಳ ಪಂದ್ಯವನ್ನು ನಡೆಸಲಾಗಿತ್ತು.

ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಟಿ20 ಸ್ವರೂಪದಲ್ಲಿ ಕ್ರಿಕೆಟ್‌ ಅನ್ನು ಪರಿಚಯಿಸಲಾಗುತ್ತಿದೆ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ 6 ತಂಡಗಳು ಸ್ಪರ್ಧಿಸುತ್ತವೆ ಎಂದು ಕೂಟದ ಆಯೋಜಕರು ದೃಢಪಡಿಸಿದ್ದಾರೆ.

ಪ್ರತಿ ವಿಭಾಗಕ್ಕೂ ಒಟ್ಟು 90 ಕ್ರೀಡಾಪಟುಗಳನ್ನು ನಿಗದಿಪಡಿಸಲಾಗಿರುವುದರಿಂದ ಪ್ರತಿ ತಂಡವು 15 ಸದಸ್ಯರ ತಂಡವನ್ನು ಹೆಸರಿಸಲು ಸಾಧ್ಯವಾಗುತ್ತದೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಅಫ್ಗಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಸೇರಿದಂತೆ 12 ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.

2028ರ ಕ್ರೀಡಾಕೂಟಕ್ಕೆ ಕ್ರಿಕೆಟ್ ಪಂದ್ಯಾವಳಿಗೆ ಅರ್ಹತಾ ಮಾನದಂಡಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ. ಆದರೆ, ಆತಿಥೇಯ ರಾಷ್ಟ್ರವಾಗಿ ಅಮೆರಿಕ ನೇರ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಉಳಿದ ಐದು ಸ್ಥಾನಕ್ಕೆ ರ್ಹತಾ ಪ್ರಕ್ರಿಯೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ