ಏಕದಿನ ವಿಶ್ವಕಪ್: ಕೊನೆಗೂ ಗೆದ್ದ ಶ್ರೀಲಂಕಾ, ಪಾಕ್ ಇಂದು ಸೋತರೆ ಕತೆ ಮುಗೀತು!

ಶುಕ್ರವಾರ, 27 ಅಕ್ಟೋಬರ್ 2023 (08:50 IST)
ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಶ್ರೀಲಂಕಾ ಕೊನೆಗೂ ಗೆಲುವಿನ ನಿಟ್ಟುಸಿರುವ ಬಿಟ್ಟಿದೆ. ಇಂದು ಪಾಕಿಸ್ತಾನ ಪ್ರಬಲ ದ.ಆಫ್ರಿಕಾವನ್ನು ಎದುರಿಸಲಿದ್ದು ಇಂದು ಸೋತರೆ ಪಾಕ್ ಹೆಚ್ಚು ಕಡಿಮೆ ಟೂರ್ನಿಯಿಂದ ಹೊರಬಿದ್ದಂತಾಗಲಿದೆ.

ಇಂಗ್ಲೆಂಡ್ ನೀಡಿದ 157 ರನ್ ಗಳ ಸುಲಭ ಗುರಿ ಬೆನ್ನತ್ತಿದ ಶ್ರೀಲಂಕಾ 25.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 160 ರನ್ ಗಳಿಸುವ ಮೂಲಕ ಗೆಲುವು ಕಂಡಿತು. ಲಂಕಾ ಪರ ಸದೀರ 65, ಪಾಥುಮ್ ನಿಸ್ಸಂಕ 77 ರನ್ ಸಿಡಿಸಿದರು. ಇದರೊಂದಿಗೆ ಲಂಕಾ ಕೂಟದಲ್ಲಿ ಎರಡನೇ ಗೆಲುವು ಕಂಡಂತಾಗಿದೆ.

ಇಂದು ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಪಾಕಿಸ್ತಾನ ಸೆಣಸಲಿದೆ. ಒಂದು ವೇಳೆ ಇಂದು ಪಾಕ್ ಸೋತರೆ ಸೆಮಿಫೈನಲ್ ನಿಂದ ಹೊರಬೀಳಲಿದೆ. ಪಾಕಿಸ್ತಾನ ಇದುವರೆಗೆ ಆಡಿದ ಐದು ಪಂದ್ಯಗಳ ಪೈಕಿ ಗೆದ್ದಿದ್ದು 2 ಮಾತ್ರ. ಅದರಲ್ಲೂ ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸೋಲು ಪಾಕ್ ತಂಡಕ್ಕೆ ಆಘಾತ ನೀಡಿದೆ.

ಇನ್ನೊಂದೆಡೆ ದ.ಆಫ್ರಿಕಾ 5 ಪಂದ್ಯಗಳಿಂದ 4 ಗೆಲುವು ಕಂಡಿದ್ದು ಸದ್ಯಕ್ಕೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಒಂದು ವೇಳೆ ಇಂದಿನ ಪಂದ್ಯ ಗೆದ್ದರೆ ಭಾರತವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಬಹುದಾಗಿದೆ. ಈ ಪಂದ್ಯ ಮಧ‍್ಯಾಹ್ನ 2 ಗಂಟೆಗೆ ನಡೆಯುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ