ಏಕದಿನ ವಿಶ್ವಕಪ್ ಕ್ರಿಕೆಟ್: ಚಿನ್ನಸ್ವಾಮಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಪಟಾಕಿ
ಭಾನುವಾರ, 12 ನವೆಂಬರ್ 2023 (17:48 IST)
Photo Courtesy: Twitter
ಬೆಂಗಳೂರು: ಏಕದಿನ ವಿಶ್ವಕಪ್ ನಲ್ಲಿ ಸೆಮಿಫೈನಲ್ ಗೆ ಮುನ್ನ ಕೊನೆಯ ಲೀಗ್ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ಬ್ಯಾಟಿಂಗ್ ಮೂಲಕವೇ ಪಟಾಕಿ ಸಿಡಿಸಿದೆ. ಕೆಎಲ್ ರಾಹುಲ್-ಶ್ರೇಯಸ್ ಅಯ್ಯರ್ ಇಬ್ಬರೂ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ದುರ್ಬಲ ನೆದರ್ಲ್ಯಾಂಡ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿದೆ. ವಿಶೇಷವೆಂದರೆ ಇಂದು ಟೀಂ ಇಂಡಿಯಾದ ಎಲ್ಲಾ ಬ್ಯಾಟಿಗರೂ 50 ಪ್ಲಸ್ ರನ್ ಗಳಿಸಿದ್ದು. ಈ ಪೈಕಿ ಶ್ರೇಯಸ್ ಅಯ್ಯರ್ ಇಷ್ಟು ದಿನ ಮಿಸ್ ಆಗಿದ್ದ ಶತಕವನ್ನೂ ಇಂದು ತಮ್ಮದಾಗಿಸಿಕೊಂಡರು. ರಾಹುಲ್ ಕೇವಲ 62 ಎಸೆತಗಳಲ್ಲಿ ಸಿಕ್ಸರ್ ಗಳ ಮೂಲಕವೇ ಶತಕ ಪೂರ್ತಿ ಮಾಡಿದರು. ಒಟ್ಟು 64 ಎಸೆತ ಎದುರಿಸಿದ ರಾಹುಲ್ 102 ರನ್ ಗಳಿಸಿ ಔಟಾದರು.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್-ಗಿಲ್ ಜೋಡಿ ಎಂದಿನಂತೇ ಅಬ್ಬರದ ಆರಂಭ ನೀಡಿತು. ಇಂದು ಗಿಲ್ ಮನಮೋಹಕ ಹೊಡೆತಗಳ ಮೂಲಕ ರಂಜಿಸಿದರು. ಕೇವಲ 32 ಎಸೆತಗಳಲ್ಲಿ 51 ರನ್ ಸಿಡಿಸಿ ಅವರು ಔಟಾದರು. ಬಳಿ ರೋಹಿತ್ ಶರ್ಮಾ ಕೂಡಾ 54 ಎಸೆತಗಳಲ್ಲಿ 61 ರನ್ ಗಳಿಸಿದರು. ವಿರಾಟ್ ಕೊಹ್ಲಿ ಕ್ರೀಸ್ ಗೆ ಬರುತ್ತಿದ್ದಂತೇ ಪ್ರೇಕ್ಷಕರಿಂದ ಭಾರೀ ಹರ್ಷೋದ್ಗಾರ ಕಂಡು ಬಂತು. ಅವರ ಇನಿಂಗ್ಸ್ 51 ರನ್ ಗಳಿಗೆ ಕೊನೆಯಾಯಿತು.
ನಂತರ ನಡೆದಿದ್ದು ಶ್ರೇಯಸ್ ಅಯ್ಯರ್-ಕೆಎಲ್ ರಾಹುಲ್ ಜೋಡಿಯ ಭರ್ಜರಿ ಆಟ. ಇಬ್ಬರೂ ನೆದರ್ಲ್ಯಾಂಡ್ಸ್ ದಾಳಿಯನ್ನು ಮನಸೋ ಇಚ್ಛೆ ದಂಡಿಸಿದರು. ಈ ಜೋಡಿ 208 ರನ್ ಗಳ ಜೊತೆಯಾಟವಾಡಿತು. ಈ ಪೈಕಿ ಶ್ರೇಯಸ್ ಅಜೇಯ 128 (94 ಎಸೆತ) ರನ್ ಗಳಿಸಿದರು. ಈ ಧಮಾಕಾ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ ಈ ವಿಶ್ವಕಪ್ ನಲ್ಲಿ ಮತ್ತೊಮ್ಮೆ 400 ಪ್ಲಸ್ ರನ್ ಗಳಿಸಲು ಸಾಧ್ಯವಾಯಿತು.