ಏಕದಿನ ವಿಶ್ವಕಪ್ ಕ್ರಿಕೆಟ್: ಟೀಂ ಇಂಡಿಯಾದ ಬೆಸ್ಟ್ ಬೌಲಿಂಗ್ ಅನಾವರಣ

ಭಾನುವಾರ, 29 ಅಕ್ಟೋಬರ್ 2023 (21:24 IST)
ಲಕ್ನೋ: ಬ್ಯಾಟಿಗರು ವಿಫಲರಾದಾಗ ಟೀಂ ಇಂಡಿಯಾಗೆ ಎಷ್ಟೋ ಬಾರಿ ಬೌಲಿಂಗ್ ಪಡೆ ಕೈ ಹಿಡಿದ ಉದಾಹರಣೆಯಿದೆ. ಇಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಅದೇ ಮ್ಯಾಜಿಕ್ ನಡೆದಿದೆ.

ಇಂಗ್ಲೆಂಡ್ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯವನ್ನು ಟೀಂ ಇಂಡಿಯಾ 100 ರನ್ ಗಳಿಂದ ಗೆದ್ದುಕೊಂಡಿದೆ. ಇಂದು ಬ್ಯಾಟಿಂಗ್ ಕೈಕೊಟ್ಟು ಟೀಂ ಇಂಡಿಯಾ ಗಳಿಸಿದ್ದು ಕೇವಲ 229 ರನ್. ಹಾಗಿದ್ದರೂ ಬೌಲರ್ ಗಳು ತಮ್ಮ ಬೆಸ್ಟ್ ಪ್ರದರ್ಶನ ಅನಾವರಣ ಮಾಡುವ ಮೂಲಕ ಕನಿಷ್ಠ ಮೊತ್ತವನ್ನೂ ಯಶಸ್ವಿಯಾಗಿ ರಕ್ಷಿಸಿಕೊಂಡಿದ್ದಾರೆ.

ಗೆಲುವಿಗೆ 230 ರನ್ ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಮೊದಲ ವಿಕೆಟ್ ಗೆ 30 ರನ್ ಸೇರಿಸಿತು. ಈ ವೇಳೆ ಬುಮ್ರಾ-ಶಮಿ ಮ್ಯಾಜಿಕ್ ಕೆಲಸ ಮಾಡಿತು. ಡೇವಿಡ್ ಮಲನ್ (16) ಮತ್ತು ಜೋ ರೂಟ್ (0) ವಿಕೆಟ್ ನ್ನು ಒಟ್ಟೊಟ್ಟಿಗೇ ಕಬಳಿಸಿದ ಬುಮ್ರಾ ಶುಭಾರಂಭ ನೀಡಿದರು. ಬಳಿಕ ಮೊಹಮ್ಮದ್ ಶಮಿ ತಮ್ಮ ಪಾತ್ರ ನಿಭಾಯಿಸಿದರು. ಅಪಾಯಕಾರಿ ಜಾನಿ ಬೇರ್ ಸ್ಟೋ (14), ಬೆನ್ ಸ್ಟೋಕ್ಸ್ (0) ರನ್ನು ಬೌಲ್ಡ್ ಮಾಡಿದ ಶಮಿ ಇಂಗ್ಲೆಂಡ್ ಕುಸಿತಕ್ಕೆ ಕಾರಣರಾದರು.

ಈ ನಡುವೆ ಕುಲದೀಪ್ ಯಾದವ್ ನಾಯಕ ಜೋಸ್ ಬಟ್ಲರ್ ರನ್ನು 10 ರನ್ ಗೇ ಪೆವಿಲಿಯನ್ ಗಟ್ಟಿದರು. ನಿಯಮಿತವಾಗಿ ವಿಕೆಟ್ ಕೀಳುತ್ತಲೇ ಸಾಗಿದ ಟೀಂ ಇಂಡಿಯಾ ಬೌಲರ್ ಗಳು ಎದುರಾಳಿಗಳಿಗೆ 230 ರನ್ ಗಳ ಗುರಿಯನ್ನೂ ಬೃಹತ್ ಮೊತ್ತವೆಂಬಂತೆ ಮಾಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಇಂಗ್ಲೆಂಡ್ 34.5 ಓವರ್ ಗಳಲ್ಲಿ 129 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಮೊಹಮ್ಮದ್ ಶಮಿ 4, ಜಸ್ಪ್ರೀತ್ ಬುಮ್ರಾ 3, ಕುಲದೀಪ್ ಯಾದವ್ 2, ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು. ವಿಶೇಷವೆಂದರೆ ಇದು ನಾಯಕನಾಗಿ ರೋಹಿತ್ ಶರ್ಮಾ 100 ನೇ ಪಂದ್ಯವಾಗಿತ್ತು. ರೋಹಿತ್ ನಾಯಕರಾಗಿ 100 ನೇ ಪಂದ್ಯದಲ್ಲಿ ಭಾರತ 100 ರನ ಗಳ ಗೆಲುವು ಸಾಧಿಸಿದ್ದು ವಿಶೇಷ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಆರಕ್ಕೆ ಆರು ಪಂದ್ಯವನ್ನೂ ಗೆದ್ದು ತನ್ನ ಅಜೇಯ ಓಟ ಮುಂದುವರಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ