ಏಕದಿನ ವಿಶ್ವಕಪ್ ಕ್ರಿಕೆಟ್: ಶತಕಕ್ಕಿಂತಲೂ ಮಿಗಿಲಾದ ಇನಿಂಗ್ಸ್, ರೋಹಿತ್ ಶರ್ಮಾಗೆ ಭೇಷ್!

ಭಾನುವಾರ, 29 ಅಕ್ಟೋಬರ್ 2023 (17:58 IST)
Photo Courtesy: Twitter
ಲಕ್ನೋ: ಹೊಡೆಬಡಿಯ ಆಟಗಾರನೊಬ್ಬನಿಗೆ ತನ್ನ ನೈಸರ್ಗಿಕ ಸ್ವಭಾವ ಬಿಟ್ಟು ರಕ್ಷಣಾತ್ಮಕವಾಗಿ ಆಡುವುದು ಸುಲಭವಲ್ಲ. ಆದರೆ ತಂಡಕ್ಕೆ ಅಗತ್ಯ ಬಿದ್ದಾಗ ಅಂತಹದ್ದೊಂದು ಇನಿಂಗ್ಸ್ ಆಡಿ ಇಂದು ಹಿಟ್ ಮ್ಯಾನ್ ರೋಹಿತ್ ಶರ್ಮಾ ಎಲ್ಲರಿಂದ ಭೇಷ್ ಎನಿಸಿಕೊಂಡರು.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದೆ. ಇಂದು ಟೀಂ ಇಂಡಿಯಾ ಬಲಾಢ್ಯ ಬ್ಯಾಟಿಂಗ್ ಸಂಪೂರ್ಣ ಕೈಕೊಟ್ಟಿತು. ಕೇವಲ ರೋಹಿತ್ ಶರ್ಮಾ ಮಾತ್ರ ತಮ್ಮ ಖ್ಯಾತಿಗೆ ತಕ್ಕ ಆಟವಾಡಿದರು.

ಡೇವಿಡ್ ವಿಲ್ಲೆಯ ಮೊದಲ ಓವರ್ ಮೇಡನ್ ಮಾಡಿದ್ದ ರೋಹಿತ್ ಎರಡನೇ ಓವರ್ ನಲ್ಲಿ ಎರಡು ಸಿಕ್ಸರ್, ಒಂದು ಬೌಂಡರಿ ಗಳಿಸಿ ಎಂದಿನಂತೆ ಬಿರುಸಿನ ಇನಿಂಗ್ಸ್ ಆಡುವ ಸೂಚನೆಯಿತ್ತರು. ಆದರೆ ಗಿಲ್ 9, ವಿರಾಟ್ ಕೊಹ್ಲಿ ಡಕೌಟ್ ಆಗಿ ನಿರ್ಗಮಿಸಿದಾಗ ಟೀಂ ಇಂಡಿಯಾ ಇನಿಂಗ್ಸ್ ಮುನ್ನಡೆಸುವ ಜವಾಬ್ಧಾರಿ ರೋಹಿತ್ ಹೆಗಲಿಗೇರಿತು. ಈ ನಡುವೆ ಕೆಎಲ್ ರಾಹುಲ್ (39) ಜೊತೆಗೂಡಿ 90 ರನ್ ಗಳ ಜೊತೆಯಾಟವಾಡಿ ತಂಡದ ಮಾನ ಕಾಪಾಡಿದರು.  ಆದರೆ ಬಳಿಕ 87 ರನ್ ಗಳಿಸಿದ್ದಾಗ ಆದಿಲ್ ರಶೀದ್ ಗೆ ವಿಕೆಟ್ ಒಪ್ಪಿಸಿ ಮತ್ತೆ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು. ಆದರೆ ಇಂದಿನ ಅವರ ಇನಿಂಗ್ಸ್ ಶತಕಕ್ಕಿಂತ ಮಿಗಿಲಾಗಿತ್ತು. ಒಟ್ಟು 101 ಎಸೆತ ಎದುರಿಸಿದ ರೋಹಿತ್ 3 ಸಿಕ್ಸರ್ ಸಹಿತ 87 ರನ್ ಗಳಿಸಿದರು.

ಕೊನೆಯ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಇಂದು ಉಪಯುಕ್ತ ಇನಿಂಗ್ಸ್ ಆಡಿದರು. ಅವರ ಅರ್ಧಶತಕದಿಂದಾಗಿ ಟೀಂ ಇಂಡಿಯಾ 200 ರ ಗಡಿ ದಾಟಲು ಸಾಧ್ಯವಾಯಿತು. ಒಟ್ಟು 47 ಎಸೆತ ಎದುರಿಸಿದ ಸೂರ್ಯ 49 ರನ್ ಗಳಿಸಿ ಔಟಾದರು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲೆ, ಕ್ರಿಸ್ ವೋಕ್ಸ್,ಆದಿಲ್ ರಶೀದ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು. ಇದೀಗ ಇಂಗ್ಲೆಂಡ್ ಗೆಲ್ಲಲು 230 ರನ್ ಗಳಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ