ನಾಗ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಲ್ಲಿ ನಡೆದ ಅಂತಿಮ ಟಿ20 ಪಂದ್ಯವನ್ನು 30 ರನ್ ಗಳಿಂದ ಗೆಲ್ಲುವುದರ ಮುಖಾಂತರ ಟೀಂ ಇಂಡಿಯಾ ಸರಣಿ ತನ್ನದಾಗಿಸಿಕೊಂಡಿದೆ.
2-1 ಅಂತರದಿಂದ ಭಾರತ ಸರಣಿ ಕೈ ವಶಮಾಡಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಬಾಂಗ್ಲಾ 19.2 ಓವರ್ ಗಳಲ್ಲಿ 144 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಬ್ಯಾಟಿಂಗ್ ನಲ್ಲಿ ಭಾರತ ಆರಂಭಿಕರನ್ನು ಬೇಗನೇ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಕನ್ನಡಿಗ ಕೆಎಲ್ ರಾಹುಲ್ 35 ಎಸೆತಗಳಲ್ಲಿ 52, ಶ್ರೇಯಸ್ ಅಯ್ಯರ್ 33 ಎಸೆತಗಳಲ್ಲಿ 62 ರನ್ ಚಚ್ಚಿ ತಂಡದ ಮೊತ್ತ ಉಬ್ಬಿಸಿದರು. ಮನೀಶ್ ಪಾಂಡೆ ಔಟಾಗದೇ 22 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾಕ್ಕೆ ಆರಂಭದಲ್ಲಿಯೇ ಆಘಾತ ಸಿಕ್ಕಿತು. ಹಾಗಿದ್ದರೂ ಒಂದು ಹಂತದಲ್ಲಿ 3 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿ ಸುಸ್ಥಿಯಲ್ಲಿತ್ತು. ಆದರೆ ದೀಪಕ್ ಚಹರ್ ದಾಳಿಗೆ ಕುಸಿದ ಬಾಂಗ್ಲಾ ಹುಲಿಗಳು ಮತ್ತೆ 16 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಉದುರಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದರು. ವಿಶ್ವದಾಖಲೆಯ ಸ್ಪೆಲ್ ಎಸೆದ ದೀಪಕ್ ಚಹರ್ 3.2 ಓವರ್ ಗಳಲ್ಲಿ ಕೇವಲ 7 ರನ್ ನೀಡಿ 6 ವಿಕೆಟ್ ಕಬಳಿಸಿದರು. ಇದು ಟಿ20 ಕ್ರಿಕೆಟ್ ನಲ್ಲೇ ಶ್ರೇಷ್ಠ ವೈಯಕ್ತಿಕ ಬೌಲಿಂಗ್ ಸಾಧನೆಯಾಗಿದೆ. ಇದಕ್ಕೂ ಮೊದಲು ಶ್ರೀಲಂಕಾದ ಅಜಂತಾ ಮೆಂಡಿಸ್ 8 ರನ್ ಗಳಿಗೆ 6 ವಿಕೆಟ್ ಕಬಳಿಸಿದ್ದು ಶ್ರೇಷ್ಠ ಬೌಲಿಂಗ್ ಆಗಿತ್ತು.