ಬ್ಯಾಟಿಂಗ್ ಬೌಲಿಂಗ್ ಮಾಡದೆಯೂ ಧೋನಿ ಅಂತಿಮ ಟಿ20 ಪಂದ್ಯದ ಹೀರೋ ಆಗಿದ್ದು ಹೇಗೆ ಗೊತ್ತಾ?!

ಕೃಷ್ಣವೇಣಿ ಕೆ

ಸೋಮವಾರ, 9 ಜುಲೈ 2018 (08:38 IST)
ಬ್ರಿಸ್ಟೋಲ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಟಿ20 ಪಂದ್ಯವನ್ನು 7 ವಿಕೆಟ್ ಗಳಿಂದ ಭರ್ಜರಿಯಾಗಿ ಗೆಲ್ಲುವುದರ ಮುಖಾಂತರ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿತು.

ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ಸಪಾಟೆ ಪಿಚ್ ನಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಶಿಖರ್ ಧವನ್ ರೂಪದಲ್ಲಿ ಮೊದಲ ಆಘಾತ ಸಿಕ್ಕಿತು. ಆದರೆ ನಂತರ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ರೋಹಿತ್ ಕೇವಲ 56 ಎಸೆತಗಳಲ್ಲಿ 5 ಸಿಕ್ಸರ್,11 ಬೌಂಡರಿ ನೆರವಿನೊಂದಿಗೆ 100 ರನ್ ಗಳಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 14 ಬಾಲ್ ಗಳಲ್ಲಿ 33 ರನ್ ಚಚ್ಚಿದರು. 18 ನೇ ಓವರ್ ನಲ್ಲಿ ಈ ಜೋಡಿ 20 ರನ್ ದೋಚಿದ್ದು ಇವರ ಅಬ್ಬರಕ್ಕೆ ಸಾಕ್ಷಿಯಾಯಿತು. ಅಂತಿಮವಾಗಿ ಭಾರತ 18.4 ಓವರ್ ಗಳಲ್ಲಿ 201 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಈ ಪಂದ್ಯದಲ್ಲಿ ರೋಹಿತ್ ಶತಕ, ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಪ್ರದರ್ಶನದಿಂದಾಗಿ ಭಾರತ ಗೆಲುವು ಕಂಡಿತು. ಆದರೆ ಇವರಿಬ್ಬರ ಹೊರತಾಗಿ ಸದ್ದಿಲ್ಲದೇ ವಿಕೆಟ್ ಕೀಪರ್ ಧೋನಿ ಹೀರೋ ಆಗಿ ಮಿಂಚಿದ್ದನ್ನು ಯಾರೂ ಗಮನಿಸಲೇ ಇಲ್ಲ.

ಧೋನಿ ಈ ಪಂದ್ಯದಲ್ಲಿ ಬೌಲಿಂಗ್ ಮಾಡಲಿಲ್ಲ, ಬ್ಯಾಟಿಂಗ್ ಗೂ ಅವಕಾಶ ಸಿಗಲಿಲ್ಲ. ಆದರೆ ವಿಕೆಟ್ ಹಿಂದುಗಡೆ ಇಂಗ್ಲೆಂಡ್ ನ ಔಟಾದ 9 ಬ್ಯಾಟ್ಸ್ ಮನ್ ಗಳ ಪೈಕಿ 6 ಬ್ಯಾಟ್ಸ್ ಮನ್ ಗಳು ಧೋನಿ ಕೈಯಲ್ಲೇ ಔಟಾಗಿ ಪೆವಿಲಿಯನ್ ಗೆ ಸಾಗಿದ್ದರು.

ಇದರಲ್ಲಿ 5 ಕ್ಯಾಚ್, ಒಂದು ರನೌಟ್ ಸೇರಿದೆ. ಒಂದು ಹಂತದಲ್ಲಿ ಧೋನಿ ಕ್ಯಾಚ್ ಹಿಡಿಯುವ ಭರದಲ್ಲಿ ವಿಕೆಟ್ ಮೇಲೇ ಬಿದ್ದರು. ಆದರೂ ಬಾಲ್ ಕೆಳಕ್ಕೆ ಹಾಕದೇ ಬ್ಯಾಟ್ಸ್ ಮನ್ ಗೆ ಪೆವಿಲಿಯನ್ ಹಾದಿ ತೋರಿಸಿದರು. ಪಾಂಡ್ಯ ಈ ಪಂದ್ಯದಲ್ಲಿ ಒಟ್ಟು ನಾಲ್ಕು ವಿಕೆಟ್ ಕಬಳಿಸಿದ್ದರು. ಆ ಪೈಕಿ ಮೂರು ಧೋನಿ ಕ್ಯಾಚ್ ಮಾಡಿದ್ದರು.  ಈ ಮೂಲಕ ತಾನು ತೆರೆಮರೆಯ ಹೀರೋ ಎಂದು ಧೋನಿ ಸಾಬೀತುಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ