ನಿಷೇಧ ಶಿಕ್ಷೆ ವಿರುದ್ಧ ತಿರುಗಿಬಿದ್ದ ಶ್ರೀಲಂಕಾ ಕ್ರಿಕೆಟಿಗ ದಿನೇಶ್ ಚಂಡಿಮಾಲ್
ಶುಕ್ರವಾರ, 22 ಜೂನ್ 2018 (09:06 IST)
ಕೊಲೊಂಬೊ: ಚೆಂಡು ವಿರೂಪ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಒಂದು ಟೆಸ್ಟ್ ಪಂದ್ಯದ ನಿಷೇಧ ಶಿಕ್ಷೆಗೊಳಗಾದ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಂಡಿಮಾಲ್ ಐಸಿಸಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಿಹಿ ಪದಾರ್ಥ ಬಳಸಿ ಚಂಡಿಮಾಲ್ ಬಾಲ್ ವಿರೂಪಗೊಳಿಸಿದ್ದು, ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಇದನ್ನು ವಿಚಾರಣೆ ನಡೆಸಿದ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ನೇತೃತ್ವದ ಸಮಿತಿಯ ವರದಿ ಆಧರಿಸಿ ಐಸಿಸಿ ಒಂದು ಪಂದ್ಯದ ನಿಷೇಧ ಮತ್ತು ಒಂದು ಪಂದ್ಯದ ಸಂಭಾವನೆಯನ್ನು ದಂಡದ ರೂಪದಲ್ಲಿ ವಿಧಿಸಿತ್ತು.
ಆದರೆ ಆರಂಭದಿಂದಲೂ ತಾನು ತಪ್ಪು ಮಾಡಿಲ್ಲವೆಂದೇ ವಾದಿಸುತ್ತಿರುವ ಚಂಡಿಮಾಲ್ ಶಿಕ್ಷೆಯ ವಿರುದ್ಧ ಐಸಿಸಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ತಂಡದ ಆಟಗಾರರ ಜತೆ ಈ ಬಗ್ಗೆ ಚರ್ಚೆ ನಡೆಸಿತ್ತು. ಇದಾದ ಬಳಿಕ ಇದೀಗ ಚಂಡಿಮಾಲ್ ಮೇಲ್ಮನವಿ ನಿರ್ಧರಿಸಿದ್ದಾರೆ. ವಿಚಾರಣೆ ಸರಿಯಾಗಿ ನಡೆದಿಲ್ಲ ಎನ್ನುವುದು ಅವರ ವಾದವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.