ಎಡ್ಜ್ ಬಾಸ್ಟನ್: ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡಿದಾಗ ನೋಡೋಣ ವಿರಾಟ್ ಕೊಹ್ಲಿಯ ನಿಜವಾದ ತಾಕತ್ತು ಏನೆಂದು.. ಹೀಗಂತ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಕಳೆದ ಭಾರಿ ಭಾರತ ಪ್ರವಾಸ ಮಾಡಿದ್ದಾಗ ಸವಾಲು ಹಾಕಿದ್ದರು. ಆ ಸವಾಲನ್ನು ಇಂದು ಕೊಹ್ಲಿ ಪೂರ್ತಿ ಮಾಡಿದ್ದಾರೆ.
ಕೊಹ್ಲಿ 2014 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಸಂಪೂರ್ಣ ವೈಫಲ್ಯಕ್ಕೊಳಗಾಗಿದ್ದನ್ನೇ ಪ್ರಸ್ತಾಪಿಸಿ ಅವರನ್ನು ಇದುವರೆಗೆ ಕೆಣಕುತ್ತಲೇ ಇದ್ದವರಿಗೆ ಇಂದು ಶತಕ ಭಾರಿಸುವ ಮೂಲಕ ವಿರಾಟ್ ತಕ್ಕ ಉತ್ತರವನ್ನೇ ಕೊಟ್ಟಿದ್ದಾರೆ.
ಅದೂ ಕೂಡಾ ತಂಡ ಕಷ್ಟದಲ್ಲಿರುವಾಗಲೇ ಕೊಹ್ಲಿ ಸಿಡಿಸಿದ ಈ ಶತಕ ಎಲ್ಲಾ ನಿರಾಶೆ, ಎಲ್ಲಾ ಅವಮಾನಗಳಿಗೆ ಕೊಟ್ಟ ಉತ್ತರದಂತಿತ್ತು. ಕೊಹ್ಲಿಯ 149 ರನ್ ಗಳ ಭರ್ಜರಿ ಇನಿಂಗ್ಸ್ ನಿಂದಾಗಿ ಭಾರತ ಮೊದಲ ಇನಿಂಗ್ಸ್ ನಲ್ಲಿ 274 ರನ್ ಗಳಿಸಿತು. ಕೇವಲ 13 ರನ್ ಗಳಿಂದ ಇಂಗ್ಲೆಂಡ್ ನ ಪ್ರಥಮ ಇನಿಂಗ್ಸ್ ನಿಂದ ಹಿನ್ನಡೆ ಅನುಭವಿಸಿತು.
ಆದರೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಗೆ ಕೇವಲ 9 ರನ್ ಗಳಿಸುವಷ್ಟರಲ್ಲಿ ಅಲೆಸ್ಟರ್ ಕುಕ್ ವಿಕೆಟ್ ನ್ನು ರವಿಚಂದ್ರನ್ ಅಶ್ವಿನ್ ಕಬಳಿಸುವ ಮೂಲಕ ಭಾರತಕ್ಕೆ ದೊಡ್ಡ ಬ್ರೇಕ್ ಕೊಟ್ಟರು. ಇದು 9 ನೇ ಬಾರಿ ಕುಕ್ ಅಶ್ವಿನ್ ಸ್ಪಿನ್ ಬಲೆಗೆ ಬಿದ್ದರು. ಇದರೊಂದಿಗೆ ಇಂಗ್ಲೆಂಡ್ ಒಟ್ಟಾರೆ ಮುನ್ನಡೆ 22 ರನ್ ಗಳಾಗಿವೆ. ಇಂದಿನ ದಿನದ ಆಟ ನಿರ್ಣಾಯಕವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.