ಕೊಹ್ಲಿ ನಾಯಕರಾಗಿದ್ದರೆ ಇಂಗ್ಲೆಂಡ್ ವಿರುದ್ಧ ಸೋಲುತ್ತಿರಲಿಲ್ಲ

Krishnaveni K

ಬುಧವಾರ, 31 ಜನವರಿ 2024 (13:30 IST)
ವಿಶಾಖಪಟ್ಟಣಂ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರೀ ಟೀಕೆಗೊಳಗಾಗಿದ್ದಾರೆ.

ಹೈದರಾಬಾದ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 190 ರನ್ ಗಳ ಬೃಹತ್ ಮುನ್ನಡೆ ಪಡೆದಿದ್ದರೂ ಸೋಲು ಕಂಡಿತ್ತು. ಇದು ಅತಿಥೇಯ ತಂಡಕ್ಕೆ ತೀರಾ ಮುಖಭಂಗ ಉಂಟು ಮಾಡಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿರಲಿಲ್ಲ.

ಸೋಲಿನ ಬಳಿಕ ಎಲ್ಲರೂ ಕೊಹ್ಲಿ ನಾಯಕತ್ವವನ್ನು ನೆನೆಸಿಕೊಂಡಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಭಾರೀ ಟೀಕೆ ಮಾಡುತ್ತಿದ್ದಾರೆ. ಇದೀಗ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್ ರೋಹಿತ್ ನಾಯಕತ್ವದ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಕೊಹ್ಲಿ ನಾಯಕರಾಗಿದ್ದರೆ ಭಾರತ ಈ ಪಂದ್ಯವನ್ನು ಸೋಲುತ್ತಿರಲಿಲ್ಲ ಎಂದಿದ್ದಾರೆ.

ಯೂ ಟ್ಯೂಬ್ ಒಂದಕ್ಕೆ ಸಂದರ್ಶನ ನೀಡಿದ ಮೈಕಲ್ ವಾನ್, ರೋಹಿತ್ ಶರ್ಮಾ ನಾಯಕರಾಗಿ ತಮ್ಮನ್ನು ತಾವು ಮೈಮರೆತು ಬಿಟ್ಟರು. ಒಂದು ವೇಳೆ ಕೊಹ್ಲಿ ನಾಯಕರಾಗಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಕೊಹ್ಲಿ ನಾಯಕತ್ವವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ. ಕಳೆದ ವಾರ ಒಂದು ವೇಳೆ ಕೊಹ್ಲಿ ನಾಯಕರಾಗಿದ್ದರೆ ಭಾರತ ಸೋಲುತ್ತಿರಲಿಲ್ಲ. ರೋಹಿತ್ ದಿಗ್ಗಜ ಆಟಗಾರ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಮೊನ್ನೆ ಮಾತ್ರ ಮೈಮರೆತುಬಿಟ್ಟರು ಎನ್ನುವುದು ಸತ್ಯ’ ಎಂದಿದ್ದಾರೆ.

ಇದಕ್ಕೆ ಮೊದಲು ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲೂ ರೋಹಿತ್ ಶರ್ಮಾ ಸಾಧಾರಣ  ನಾಯಕ ಎಂದಿದ್ದರು. ಪಾಪ್ ರ ಸ್ವೀಪ್ ತಂತ್ರಕ್ಕೆ ಭಾರತೀಯ ಬೌಲರ್ ಗಳ ಬಳಿ ಉತ್ತರವೇ ಇರಲಿಲ್ಲ ಎಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ