ಶುಭಮನ್‌ ಗಿಲ್‌ ಅಬ್ಬರಕ್ಕೆ ಸುಸ್ತಾದ ಆಂಗ್ಲರ ಪಡೆ: ಭಾರತಕ್ಕೆ ನಾಲ್ಕು ವಿಕೆಟ್‌ಗಳ ಭರ್ಜರಿ ಜಯ

Sampriya

ಗುರುವಾರ, 6 ಫೆಬ್ರವರಿ 2025 (20:47 IST)
Photo Courtesy X
ನಾಗ್ಪುರ: ಉಪನಾಯಕ ಶುಭಮನ್‌ ಗಿಲ್‌ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ಕ್ರಿಕೆಟ್‌ ತಂಡ ಗುರುವಾರ ಇಲ್ಲಿ ನಡೆದ ಇಂಗ್ಲೆಂಡ್‌ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಅಂತರದ ಗೆಲುವು ಸಾಧಿಸಿದೆ.

ಇಲ್ಲಿನ ವಿದರ್ಭ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರ ಬಳಗ 47.4 ಓವರ್‌ಗಳಲ್ಲಿ 248 ರನ್‌ ಗಳಿಸಿ ಆಲೌಟ್‌ ಆಯಿತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಇನ್ನೂ 68 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗೆ 251 ರನ್ ಗಳಿಸಿ ಜಯದ ನಗೆ ಬೀರಿತು.

ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಏಕದಿನ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಪಂದ್ಯವಾಡಿದ ಯಶಸ್ವಿ ಜೈಸ್ವಾಲ್‌ ಜೊತೆ ಇನಿಂಗ್ಸ್‌ ಆರಂಭಿಸಿದ ನಾಯಕ ರೋಹಿತ್‌ ಶರ್ಮಾ ಕೇವಲ 2 ರನ್ ಗಳಿಸಿ ಔಟಾದರು. ಜೈಸ್ವಾಲ್‌ (15 ರನ್‌) ಸಹ ಅವರ ಹಿಂದೆಯೇ ವಿಕೆಟ್‌ ಒಪ್ಪಿಸಿದರು.

ಶುಭಮನ್‌ ಗಿಲ್‌ ಮತ್ತು ಶ್ರೇಯಸ್‌ ಅಯ್ಯರ್‌, 3ನೇ ವಿಕೆಟ್‌ ಪಾಲುದಾರಿಕೆಯಲ್ಲಿ 94 ರನ್‌ ಸೇರಿಸಿದರು. 59 ರನ್ ಗಳಿಸಿದ್ದ ಅಯ್ಯರ್‌ ಔಟಾದ ನಂತರವೂ ಚೆಂದದ ಬ್ಯಾಟಿಂಗ್ ಮುಂದುವರಿಸಿದ ಗಿಲ್‌, ಬಳಿಕ ಬಂದ ಅಕ್ಷರ್ ಪಟೇಲ್‌ (52 ರನ್‌) ಜೊತೆಗೂಡಿ 108 ರನ್ ಕೂಡಿಸಿದರು. ನಂತರ ಕ್ರೀಸ್‌ಗೆ ಇಳಿದ ಕೆ.ಎಲ್‌.ರಾಹುಲ್ ಆಟ ನಡೆಯಲಿಲ್ಲ. ಅವರು ಕೇವಲ 2 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

ಚೆಂದದ ಇನಿಂಗ್ಸ್‌ ಕಟ್ಟಿದ ಗಿಲ್‌, ಶತಕದ ಹೊಸ್ತಿಲಲ್ಲಿ ಎಡವಿದರು. 96 ಎಸೆತಗಳನ್ನು ಎದುರಿಸಿದ ಅವರು 87 ರನ್ ಗಳಿಸಿ ಔಟಾದರು. ಅವರ ಇನಿಂಗ್ಸ್‌ನಲ್ಲಿ 14 ಬೌಂಡರಿಗಳಿದ್ದವು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ (9 ರನ್‌) ಮತ್ತು ರವೀಂದ್ರ ಜಡೇಜ (12 ರನ್‌) ಗೆಲುವಿನ ಲೆಕ್ಕ ಚುಕ್ತಾ ಮಾಡಿದರು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಜಾಸ್‌ ಬಟ್ಲರ್‌ ಬಳಗಕ್ಕೆ, ಆರಂಭಿಕ ಬ್ಯಾಟರ್‌ಗಳು ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ, ಟೀಂ ಇಂಡಿಯಾ ಬೌಲರ್‌ಗಳ ಕರಾರುವಕ್‌ ದಾಳಿ ಎದುರು ರನ್‌ಗಳ ಮಹಲು ಕಟ್ಟಲು ಆಂಗ್ಲರಿಗೆ ಸಾಧ್ಯವಾಗಲಿಲ್ಲ.

ಇನಿಂಗ್ಸ್‌ ಆರಂಭಿಸಿದ ಫಿಲ್‌ ಸಾಲ್ಟ್‌ (26 ಎಸೆತಗಳಲ್ಲಿ 43 ರನ್) ಹಾಗೂ ಬೆನ್‌ ಡಕೆಟ್‌ (29 ಎಸೆತಗಳಲ್ಲಿ 32 ರನ್) ಜೋಡಿ ಬಿರುಸಿನ ಬ್ಯಾಟಿಂಗ್‌ ಮೂಲಕ ಮೊದಲ ವಿಕೆಟ್‌ಗೆ ಪಾಲುದಾರಿಕೆಯಲ್ಲಿ 8.5 ಓವರ್‌ಗಳಲ್ಲೇ 75 ರನ್‌ ಬಾರಿಸಿದರು.

ಈ ಹಂತದಲ್ಲಿ ಸಾಲ್ಟ್‌ ರನೌಟ್‌ ಆದರು. ಬೆನ್‌ ಡಕೆಟ್‌ ಸಹ ಅವರ ಹಿಂದೆಯೇ ಹೊರಟರು. ನಂತರ ಬಂದ ಹ್ಯಾರಿ ಬ್ರೂಕ್‌ ಖಾತೆಯನ್ನೇ ತೆರೆಯಲಿಲ್ಲ. ಕೇವಲ 2 ರನ್‌ ಅಂತರದಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಪತನಗೊಂಡದ್ದು, ಆಂಗ್ಲರ ತಂಡದ ರನ್‌ ಗಳಿಕೆ ವೇಗವನ್ನು ತಗ್ಗಿಸಿತು.

ನಂತರ ನಾಯಕ ಬಟ್ಲರ್‌ ಅವರು, ಜೋ ರೂಟ್‌ (31 ಎಸೆತಗಳಲ್ಲಿ 19 ರನ್) ಮತ್ತು ಜೇಕಬ್‌ ಬೆಥಲ್‌ ಅವರೊಂದಿಗೆ ಎರಡು ಉಪಯುಕ್ತ ಜೊತೆಯಾಟಗಳಲ್ಲಿ ಪಾಲ್ಗೊಂಡರು. ರೂಟ್‌ ಜೊತೆ 4ನೇ ವಿಕೆಟ್‌ಗೆ 44 ರನ್ ಕೂಡಿಸಿದ ಅವರು, ಬೆಥಲ್‌ ಜೊತೆ 5ನೇ ವಿಕೆಟ್‌ಗೆ 59 ರನ್‌ ಸೇರಿಸಿದರು.

67 ಎಸೆತಗಳಲ್ಲಿ 52 ರನ್‌ ಗಳಿಸಿದ್ದ ಬಟ್ಲರ್‌, ಅರ್ಧಶತಕದ ಬೆನ್ನಲ್ಲೇ ಪೆವಿಲಿಯನ್‌ ಸೇರಿಕೊಂಡರು. 64 ಎಸೆತಗಳಲ್ಲಿ 51 ರನ್‌ ಕಲೆಹಾಕಿದ್ದ ಬೆಥೆಲ್‌ ಸಹ ನಾಯಕನನ್ನೇ ಅನುಸರಿಸಿದರು. ಲಿಯಾಮ್‌ ಲಿವಿಂಗ್ಟ್‌ಸ್ಟೋನ್‌ ಆಟ ಕೇವಲ 5 ರನ್‌ ಗಳಿಗೆ ಕೊನೆಯಾಯಿತು.

ಕೊನೆಯಲ್ಲಿ ಬೀಸಾಟವಾಡಿದ ಜೋಫ್ರಾ ಆರ್ಚರ್‌ (ಅಜೇಯ 21 ರನ್‌) ತಮ್ಮ ತಂಡದ ಮೊತ್ತವನ್ನು 250ರ ಸಮೀಪಕ್ಕ ಕೊಂಡೊಯ್ದರು.

ಪದಾರ್ಪಣೆ ಪಂದ್ಯವಾಡಿದ ಹರ್ಷಿತ್ ರಾಣಾ ಈ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಜೇಬಿಗಿಳಿಸಿಕೊಂಡರು. 7 ಓವರ್‌ಗಳಲ್ಲಿ 53 ರನ್‌ ಬಿಟ್ಟು ದುಬಾರಿಯಾದರೂ, ಬೆನ್‌ ಡಕೆಟ್‌, ಹ್ಯಾರಿ ಬ್ರೂಕ್‌ ಮತ್ತು ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

ಅವರಿಗೆ ಉತ್ತಮ ಸಹಕಾರ ನೀಡಿದ ರವೀಂದ್ರ ಜಡೇಜ ಸಹ 3 ವಿಕೆಟ್‌ ಪಡೆದರು. 9 ಓವರ್‌ಗಳಲ್ಲಿ ಕೇವಲ 26 ರನ್‌ ನೀಡಿದ ಅವರು, ಜೋ ರೂಟ್‌, ಜೇಕಬ್‌ ಬೆಥೆಲ್‌, ಆದಿಲ್‌ ರಶೀದ್‌ ಅವರನ್ನು ಔಟ್‌ ಮಾಡಿದರು. ಮೊಹಮ್ಮದ್‌ ಶಮಿ, ಅಕ್ಷರ್‌ ಪಟೇಲ್‌ ಮತ್ತು ಕುಲದೀಪ್‌ ಯಾದವ್‌ ತಲಾ ಒಂದು ವಿಕೆಟ್‌ ಹಂಚಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ