ನಾಗ್ಪುರ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಭಾರತ ತಂಡದ ರೋಹಿತ್ ಶರ್ಮಾ ಕಳಪೆ ಆಟ ಮುಂದುವರಿದಿದೆ. ಇಂಗ್ಲೆಂಡ್ ನೀಡಿದ 249 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಭಾರತ ಪರ ಆರಂಭಿಕ ಆಟಗಾರನಾಗಿ ಕ್ರೀಸ್‌ಗಿಳಿದ ರೋಹಿತ್ ಶರ್ಮಾ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.
ರೋಹಿತ್ ಶರ್ಮಾ ತಾನು ಎದುರಿಸಿದ 7 ಬಾಲ್ಗಳಲ್ಲಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸಾಕೀಬ್ ಮಹ್ಮದ್ ಬೌಲಿಂಗ್ನಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ಗೆ ಕ್ಯಾಚ್ ನೀಡಿ ಮೈದಾನದಿಂದ ಹೊರನಡೆದರು.
ಮಹತ್ವದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಕೈ ಕೊಟ್ಟ ರೋಹಿತ್ ವಿರುದ್ಧ ಭಾರೀ ಆಕ್ರೋಶ ಕೇಳಿ ಬಂದಿದೆ. ನಾಚಿಕೆ ಆಗಬೇಕು ನಿನಗೆ, ಆದಷ್ಟು ಬೇಗೆ ರಿಟೈರ್ ಆಗು ಎಂದು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ರು.
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲೂ ಕಳಪೆ ಫಾರ್ಮ್ನಲ್ಲಿದ್ದರು. ತವರು ಹಾಗೂ ವಿದೇಶ ಎರಡೂ ಕಡೆ ರನ್ಗಳಿಸಲು ಪರದಾಡಿದ್ರು. ಬಾರ್ಡರ್ ಗಾವಾಸ್ಕರ್ ಟ್ರೋಫಿಯಲ್ಲಿ ದಯನೀಯ ವೈಫಲ್ಯ ಕಂಡ ನಂತರ ಇವರು ರಣಜಿ ಕ್ರಿಕೆಟ್ನಲ್ಲೂ ಫ್ಲಾಪ್ ಆದರು.
ಕಳೆದ 15 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ರೋಹಿತ್ ಕೇವಲ ಒಂದು ಅರ್ಧಶತಕ ಗಳಿಸಿದ್ದಾರೆ. ಇತ್ತೀಚೆಗೆ, ರೋಹಿತ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್ ಗಳಿಸಲು ಹೆಣಗಾಡಿದರು. ಇವರು 3 ಟೆಸ್ಟ್ಗಳ 5 ಇನ್ನಿಂಗ್ಸ್ನಲ್ಲಿ ಕೇವಲ 31 ರನ್ ಗಳಿಸಿದ್ದರು.