ಬೂಮ್ರಾಗೆ ನಾಲ್ಕು ವಿಕೆಟ್‌: ಕೊನೆಯಲ್ಲಿ ಭಾರತವನ್ನು ಕಾಡಿದ ಲಯನ್; ಆಸಿಸ್‌ಗೆ 333 ರನ್ ಮುನ್ನಡೆ

Sampriya

ಭಾನುವಾರ, 29 ಡಿಸೆಂಬರ್ 2024 (14:00 IST)
Photo Courtesy X
ಮೆಲ್ಬರ್ನ್‌: ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿಯ 4ನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ಆತೀಥೇಯ ಆಸ್ಟ್ರೇಲಿಯಾ ತಂಡಕ್ಕೆ  ನೇಥನ್‌ ಲಯನ್‌ ಹಾಗೂ ಸ್ಕಾಟ್‌ ಬೋಲ್ಯಾಂಡ್‌ ಆಸರೆಯಾದರು.

ನೇಥನ್‌ ಮತ್ತು ಸ್ಕಾಟ್ ಅವರ ಆಟದ ಬಲದಿಂದ 4ನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ ಕಳೆದುಕೊಂಡು 228 ರನ್‌ ಕಲೆಹಾಕಿರುವ ಕಾಂಗರೂ ಪಡೆ, 333 ರನ್‌ಗಳ ಮುನ್ನಡೆ ಸಾಧಿಸಿದೆ.

ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ತಂಡ 474 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ, 369 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಹೀಗಾಗಿ, 105 ರನ್‌ಗಳ ಮುನ್ನಡೆ ಪಡೆದಿದ್ದ ಪ್ಯಾಟ್‌ ಕಮಿನ್ಸ್‌ ಬಳಗ, ಭಾರತಕ್ಕೆ ಬೃಹತ್‌ ಗುರಿ ನೀಡುವ ಲೆಕ್ಕಾಚಾರದಲ್ಲಿ ಕಣಕ್ಕಿಳಿದಿತ್ತು.

ಆದರೆ, ಅದಕ್ಕೆ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ ಮತ್ತು ಮೊಹಮ್ಮದ್‌ ಸಿರಾಜ್‌ ಆರಂಭದಲ್ಲಿ ತೊಡಕಾದರು. ಸಿರಾಜ್‌ ಮೂರು ವಿಕೆಟ್‌ ಕಬಳಿಸಿದರು.

ಕಮಿನ್ಸ್‌ ಅವರು 9ನೇ ವಿಕೆಟ್‌ ರೂಪದಲ್ಲಿ ಔಟಾದಾಗ ಕೇವಲ 5 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ನೇಥನ್‌ ಲಯನ್‌ ಹಾಗೂ ಸ್ಕಾಟ್‌ ಬೋಲ್ಯಾಂಡ್‌, ದಿನದಾಟದ ಕೊನೆಯಲ್ಲಿ ಟೀಂ ಇಂಡಿಯಾವನ್ನು ಕಾಡಿದರು. ಇನ್ನೇನು, ಆಸಿಸ್‌ ಇನಿಂಗ್ಸ್‌ ಮುಗಿಯಿತು ಎಂದುಕೊಂಡಿದ್ದವರ ಹುಬ್ಬೇರುವಂತೆ ಮಾಡಿದರು.

ಒಟ್ಟಾರೆ 54 ಎಸೆತಗಳನ್ನು ಎದುರಿಸಿದ ಲಯನ್‌ 5 ಬೌಂಡರಿ ಸಹಿತ 41 ರನ್‌ ಬಾರಿಸಿದರು. ಅವರಿಗೆ ಉತ್ತಮ ಸಹಕಾರ ನೀಡಿದ ಬೋಲ್ಯಾಂಡ್‌ 65 ಎಸೆತಗಳಲ್ಲಿ 10 ರನ್‌ ಗಳಿಸಿದರು. ಮುರಿಯದ ಕೊನೇ ವಿಕೆಟ್‌ ಪಾಲುದಾರಿಕೆಯಲ್ಲಿ 55 ರನ್ ಕೂಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ