ಬಿಸಿಸಿಐ ಮುಂದೆ ಮೂರು ಷರತ್ತು ಇಟ್ಟ ಗೌತಮ್ ಗಂಭೀರ್: ಷರತ್ತಿನಿಂದ ರೋಹಿತ್ ಶರ್ಮಾ, ಕೊಹ್ಲಿಗೆ ಸಂಕಷ್ಟ

Krishnaveni K

ಬುಧವಾರ, 19 ಜೂನ್ 2024 (10:06 IST)
Photo Credit: Facebook
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ನಿನ್ನೆ ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ನಡೆಸಿದೆ. ಈ ವೇಳೆ ಗಂಭೀರ್ ಮೂರು ಷರತ್ತುಗಳನ್ನು ವಿಧಿಸಿದ್ದು ಇದಕ್ಕೆ ಬಿಸಿಸಿಐ ಒಪ್ಪಿಗೆ ಕೊಟ್ಟಿದೆ ಎನ್ನಲಾಗಿದೆ.

ಗೌತಮ್ ಗಂಭೀರ್ ರನ್ನು ಆನ್ ಲೈನ್ ಮೂಲಕವೇ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ನಡೆಸಿದೆ. ಈ ವೇಳೆ ಗಂಭೀರ್ ಕೋಚ್ ಆಗಲು ಮೂರು ಪ್ರಮುಖ ಷರತ್ತುಗಳನ್ನು ವಿಧಿಸಿದ್ದಾರೆ. ಈ ಮೂರೂ ಷರತ್ತುಗಳಿಗೂ ಬಿಸಿಸಿಐ ಕೂಡಾ ಒಪ್ಪಿದೆ. ಇದನ್ನು ಜಾರಿಗೊಳಿಸಿದರೆ ಟೀಂ ಇಂಡಿಯಾದ ಹಿರಿಯ ಆಟಗಾರರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಗಂಭೀರ್ ವಿಧಿಸಿರುವ ಮೂರು ಷರತ್ತುಗಳಲ್ಲಿ ಮೊದಲನೆಯದು, ಟೀಂ ಇಂಡಿಯಾಕ್ಕೆ ಮೂರೂ ಫಾರ್ಮ್ಯಾಟ್ ಗೆ ಮೂರು ತಂಡ ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದಾಗಿದೆ. ಅಂದರೆ ಟೆಸ್ಟ್ ಮಾದರಿಗೆ ಒಂದು ತಂಡ, ಏಕದಿನ ಮತ್ತು ಟಿ20 ಫಾರ್ಮ್ಯಾಟ್ ಗೆ ಪ್ರತ್ಯೇಕ ತಂಡ ರಚನೆ ಮಾಡಲು ಅವಕಾಶ ಕೊಡಬೇಕು ಎಂದಿದ್ದಾರೆ. ಹೀಗಾದಲ್ಲಿ ಕಿರು ಮಾದರಿಯಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತ ಹಿರಿಯ ಆಟಗಾರರು ಅನಿವಾರ್ಯವಾಗಿ ನಿವೃತ್ತಿಯಾಗಬೇಕಾಗುತ್ತದೆ.

ಗಂಭೀರ್ ವಿಧಿಸಿರುವ ಇನ್ನೊಂದು ಷರತ್ತು ಎಂದರೆ ಕ್ರಿಕೆಟ್ ತಂಡದ ಮೇಲೆ ನನಗೆ ಸಂಪೂರ್ಣ ಅಧಿಕಾರವಿರಬೇಕು ಎಂದಿದ್ದಾರೆ. ಅಂದರೆ ತಂಡದ ಆಯ್ಕೆ, ಆಟಗಾರರ ಬದಲಾವಣೆ, ನಿರ್ಧಾರಗಳಲ್ಲಿ ಗಂಭೀರ್ ಗೆ ಸಂಪೂರ್ಣ ಅಧಿಕಾರವಿರಲಿದೆ. ಮೂರನೆಯ ಷರತ್ತು ಎಂದರೆ ತನ್ನ ಸಹಾಯಕ ಸಿಬ್ಬಂದಿಗಳನ್ನು ನೇಮಿಸುವ ಅಧಿಕಾರ ತನಗಿರಬೇಕು ಎಂದು ಕೇಳಿಕೊಂಡಿದ್ದಾರೆ. ಇದೆಲ್ಲದಕ್ಕೂ ಬಿಸಿಸಿಐ ಒಪ್ಪಿದ್ದು, ಮುಂದಿನ ಎರಡು ದಿನಗಳಲ್ಲೇ ಗಂಭೀರ್ ಹೆಸರು ಕೋಚ್ ಆಗಿ ಘೋಷಣೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ