ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಸಂದರ್ಶನ ಇಂದು

Krishnaveni K

ಮಂಗಳವಾರ, 18 ಜೂನ್ 2024 (14:33 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಇಂದೇ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸಂದರ್ಶನ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ. ಗಂಭೀರ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಏಕಾಂಗಿ ಕ್ರಿಕೆಟಿಗರಾಗಿದ್ದಾರೆ.

ರಾಹುಲ್ ದ್ರಾವಿಡ್ ಕೋಚ್ ಅವಧಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳ್ಳುತ್ತಿದೆ. ಹೀಗಾಗಿ ಬಿಸಿಸಿಐ ಹೊಸ ಕೋಚ್ ಗಳಿಗಾಗಿ ಅರ್ಜಿ ಆಹ್ವಾನಿಸಿತ್ತು. ಆದರೆ ಕೆಲವು ಸಾಮಾನ್ಯ ವ್ಯಕ್ತಿಗಳು ಅರ್ಜಿ ಹಾಕಿದ್ದು ಬಿಟ್ಟರೆ ಅರ್ಹ, ಮಾಜಿ ಕ್ರಿಕೆಟಿಗರು ಯಾರೂ ಅರ್ಜಿ ಹಾಕಿರಲಿಲ್ಲ. ಈ ನಡುವೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಐಪಿಎಲ್ ನಲ್ಲಿ ಕೆಕೆಆರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಮೆಂಟರ್ ಗೌತಮ್ ಗಂಭೀರ್ ಜೊತೆ ಮಾತುಕತೆ ನಡೆಸಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.

ಅದರಂತೆ ಗಂಭೀರ್ ಸಂದರ್ಶನ ಪ್ರಕ್ರಿಯೆ ಇಂದು ನಡೆಯಲಿದೆ. ಕ್ರಿಕೆಟ್ ಸಲಹಾ ಸಮಿತಿ (ಸಿಎಎ) ಗಂಭೀರ್ ಸಂದರ್ಶನ ಮಾಡಲಿದೆ. ಈ ಸಲಹಾ ಸಮಿತಿಯಲ್ಲಿ ಅಶೋಕ್ ಮಲ್ಹೋತ್ರಾ, ಜತಿನ್ ಪರಂಜಪೆ, ಸುಲಕ್ಷಣ ನಾಯಕ್ ಇದ್ದಾರೆ. ಈ ಸಮಿತಿ ಇಂದು ಗಂಭೀರ್ ಸಂದರ್ಶನ ನಡೆಸಲಿದೆ.

ಅದಾದ ಬಳಿಕ ಹೊಸ ಆಯ್ಕೆ ಸಮಿತಿ ಮುಖ್ಯಸ್ಥನ ಆಯ್ಕೆ ಪ್ರಕ್ರಿಯೆಯನ್ನೂ ಈ ಸಮಿತಿ ನಡೆಸಲಿದೆ. ಈಗಾಗಲೇ ಬಿಸಿಸಿಐ ಕೋಚ್ ಹುದ್ದೆಗೆ ಯಾವುದೇ ಆಸೀಸ್ ಆಟಗಾರನನ್ನು ಸಂಪರ್ಕಿಸಿಲ್ಲ ಎಂದಿತ್ತು. ಹೀಗಾಗಿ ಗಂಭೀರ್ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ