ಗೌತಮ್ ಗಂಭೀರ್ ಕೋಚ್ ಆದರೆ ರೋಹಿತ್ ಶರ್ಮಾಗೆ ಓಕೆ, ಕೊಹ್ಲಿ ಕತೆಯೇನು

Krishnaveni K

ಬುಧವಾರ, 29 ಮೇ 2024 (12:38 IST)
ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಇದೀಗ ಐಪಿಎಲ್ ನ ಯಶಸ್ವೀ ಮೆಂಟರ್ ಗೌತಮ್ ಗಂಭೀರ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಆದರೆ ಗೌತಮ್ ಗಂಭೀರ್ ಕೋಚ್ ಆದರೆ ಯಾರಿಗೆ ಇಷ್ಟವಾಗಬಹುದು, ಯಾರಿಗೆ ಕಷ್ಟವಾಗಬಹುದು ಇಲ್ಲಿದೆ ವಿಶ್ಲೇಷಣೆ.

ಟೀಂ ಇಂಡಿಯಾ 2011 ರಲ್ಲಿ ವಿಶ್ವಕಪ್ ಫೈನಲ್ ಗೆಲುವಿನಲ್ಲೂ ಗೌತಿ ಪ್ರಮುಖ ಕೊಡುಗೆ ನೀಡಿದ್ದರು. ಅವರು ಅಂದು ಅರ್ಧಶತಕ ಸಿಡಿಸಿ ತಂಡಕ್ಕೆ ಆಧಾರವಾಗಿದ್ದರು. ಐಪಿಎಲ್ ನಲ್ಲೂ ನಾಯಕರಾಗಿ ಎರಡು ಬಾರಿ ಮತ್ತು ಕೋಚ್ ಆಗಿ ಒಂದು ಬಾರಿ ಚಾಂಪಿಯನ್ ಆದ ಹಿರಿಮೆ ಅವರದ್ದು.

ಹೀಗಾಗಿ ಮಲ್ಟಿ ಟೀಂ ಈವೆಂಟ್ ಗಳಲ್ಲಿ ತಂಡ ಮುನ್ನಡೆಸುವ ನಿಟ್ಟಿನಲ್ಲಿ ಗಂಭೀರ್ ಎತ್ತಿದ ಕೈ ಎಂದು ಹೆಸರುವಾಸಿಯಾಗಿದ್ದಾರೆ. ಭಾರತಕ್ಕೂ ಈಗ ಐಸಿಸಿ ಟ್ರೋಫಿಯ ಬರ ಎದುರಾಗಿದೆ. ಬರೋಬ್ಬರಿ 10 ವರ್ಷಗಳ ಬಳಿಕ ಒಂದು ಐಸಿಸಿ ಟ್ರೋಫಿ ಗೆಲುವಿಗಾಗಿ ಎದಿರು ನೋಡುತ್ತಿದೆ. ಹೀಗಾಗಿ ಗೌತಮ್ ಗಂಭೀರ್ ರನ್ನು ಕೋಚ್ ಆಗಿ ಕರೆತರಲು ಬಿಸಿಸಿಐ ಪ್ರಯತ್ನ ನಡೆಸಿದೆ.

ಆದರೆ ಗೌತಮ್ ಗಂಭೀರ್ ಆಕ್ರಮಣಕಾರೀ ಸ್ವಭಾವದವರು. ತಮ್ಮ ತಂಡದ ಆಟಗಾರರಿಗೋಸ್ಕರ ಎದುರಾಳಿಗಳ ಜೊತೆ ಕಾದಾಟಕ್ಕಿಳಿಯಲೂ ಹಿಂದೆ ಮುಂದೆ ನೋಡಲ್ಲ. ಇದೇ ಕಾರಣಕ್ಕೆ ಐಪಿಎಲ್ ನಲ್ಲಿ ಹಿಂದೆ ವಿರಾಟ್ ಕೊಹ್ಲಿ ಜೊತೆ ಮೈದಾನದಲ್ಲೇ ವಾಗ್ವಾದಕ್ಕಿಳಿದಿದ್ದರು. ಇದೀಗ ಅದೇ ಕೊಹ್ಲಿ ಇರುವ ತಂಡಕ್ಕೆ ಗಂಭೀರ್ ಕೋಚ್ ಆಗಿ ಹೋದರೆ ತಂಡದಲ್ಲಿ ಎಲ್ಲವೂ ಸರಿಯಿರುತ್ತಾ ಎನ್ನುವುದೇ ಪ್ರಶ್ನೆ.

ಆದರೆ ಗಂಭೀರ್ ಮತ್ತು ರೋಹಿತ್ ಶರ್ಮಾ ನಡುವೆ ಉತ್ತಮ ಬಾಂಧವ್ಯವಿದೆ. ಇಬ್ಬರೂ ಐಪಿಎಲ್ ಪಂದ್ಯಾವಳಿಗಳ ವೇಳೆಯೂ ಸಿಕ್ಕಾಗಲೆಲ್ಲಾ ಆತ್ಮೀಯರಾಗಿ ಮಾತನಾಡುತ್ತಾರೆ. ಹೀಗಾಗಿ ರೋಹಿತ್ ಜೊತೆಗೆ ಗಂಭೀರ್ ಸುಸ್ರೂತ್ರವಾಗಿರಬಹುದು. ಇತ್ತೀಚೆಗೆ ಕೊಹ್ಲಿ ಜೊತೆಗೆ ಮೈದಾನದಲ್ಲಿ ಕಾಂಪ್ರಮೈಸ್ ಮಾಡಿಕೊಂಡಿರುವುದರಿಂದ ಗಂಭೀರ್ ಕೋಚ್ ಆದರೂ ಸಮಸ್ಯೆಯಾಗದೇನೋ ಎಂಬ ಭರವಸೆ ಅಭಿಮಾನಿಗಳದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ