ಮುಂದಿನ ವರ್ಷದ ಐಪಿಎಲ್ ಮೊದಲ ಪಂದ್ಯಕ್ಕೇ ಹಾರ್ದಿಕ್ ಪಾಂಡ್ಯಗೆ ನಿಷೇಧ

Krishnaveni K

ಶನಿವಾರ, 18 ಮೇ 2024 (14:26 IST)
ಮುಂಬೈ: ಮುಂದಿನ ವರ್ಷದ ಐಪಿಎಲ್ ನ ಮೊದಲ ಪಂದ್ಯಕ್ಕೇ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ನಿಷೇಧ ಶಿಕ್ಷೆ ಅನುಭವಿಸಲಿದ್ದಾರೆ. ಐಪಿಎಲ್ ನಿಯಮ ಮುರಿದಿದ್ದಕ್ಕೆ ಈ ಶಿಕ್ಷೆ ನೀಡಲಾಗಿದೆ.

ಐಪಿಎಲ್ ನಲ್ಲಿ ನಿಧಾನಗತಿಯ ಓವರ್ ನಡೆಸಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮುಂಬೈ ಇಂಡಿಯನ್ಸ್ ಈಗಾಗಲೇ ಎರಡು ಬಾರಿ ಈ ಐಪಿಎಲ್ ನಲ್ಲಿ ನಿಧಾನಗತಿಯ ಓವರ್ ನಡೆಸಿತ್ತು. ಇದಕ್ಕೆ ಹಾರ್ದಿಕ್ ಪಾಂಡ್ಯ ನಿಯಮದ ಪ್ರಕಾರ ಮೊದಲು 12 ಲಕ್ಷ ರೂ. ಮತ್ತು ಎರಡನೇ ಬಾರಿ ತಪ್ಪು ಮಾಡಿದಾಗ 24 ಲಕ್ಷ ರೂ. ದಂಡ ತೆತ್ತಿದ್ದರು.

ಆದರೆ ಈಗ ನಿನ್ನೆ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ ಮುಂಬೈ ಮತ್ತೆ ಓವರ್ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ. ನಿಗದಿತ ಸಮಯದಲ್ಲಿ 20 ಓವರ್ ಮುಗಿಸದೇ ಇದ್ದ ತಪ್ಪಿಗೆ ಹಾರ್ದಿಕ್ ಪಾಂಡ್ಯ ಈಗ ಒಂದು ಪಂದ್ಯದ ನಿಷೇಧಕ್ಕೊಳಗಾಗಿದ್ದಾರೆ.

ಈ ಆವೃತ್ತಿಯಲ್ಲಿ ಮುಂಬೈಗೆ ಇದು ಕೊನೆಯ ಪಂದ್ಯವಾಗಿತ್ತು. ಹೀಗಾಗಿ ಈ ನಿಷೇಧ ಶಿಕ್ಷೆಯನ್ನು ಹಾರ್ದಿಕ್ ಮುಂದಿನ ವರ್ಷ ಐಪಿಎಲ್ ನ ಮೊದಲ ಪಂದ್ಯದಲ್ಲಿ ಅನುಭವಿಸಲಿದ್ದಾರೆ. ಜೊತೆಗೆ 30 ಲಕ್ಷ ರೂ. ದಂಡವನ್ನೂ ತೆರಬೇಕಾಗುತ್ತದೆ. ಐಪಿಎಲ್ ನಿಯಮದ ಪ್ರಕಾರ ಒಂದು ಇನಿಂಗ್ಸ್ 1 ಗಂಟೆ 30 ನಿಮಿಷ ಅವಧಿಯಲ್ಲಿ ಮುಗಿಯಬೇಕು. ಇಲ್ಲದೇ ಹೋದರೆ ದಂಡ ತೆರಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ