ಬೆಂಗಳೂರು: ಐಪಿಎಲ್ 2024 ರಲ್ಲಿ ಇಂದು ನಡೆಯಲಿರುವ ಆರ್ ಸಿಬಿ ಮತ್ತು ಸಿಎಸ್ ಕೆ ನಡುವಿನ ಲೀಗ್ ಪಂದ್ಯಕ್ಕೆ ಫೈನಲ್ ಗಿಂತ ಹೆಚ್ಚು ಕಳೆ ಬಂದಿದೆ. ಇದಕ್ಕೆ ಕಾರಣ ಎರಡೂ ತಂಡಕ್ಕೆ ಪ್ಲೇ ಆಫ್ ಗೇರಲು ಇಂದಿನ ಪಂದ್ಯ ನಿರ್ಣಾಯಕವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಹಂತದವರೆಗೆ ತಲುಪಿದ್ದೇ ರೋಚಕ ಕತೆ. ಆರಂಭದಲ್ಲಿ ಸತತವಾಗಿ ಸೋಲುತ್ತಲೇ ಬಂದಿದ್ದ ಆರ್ ಸಿಬಿ ಈಗ ಪ್ಲೇ ಆಫ್ ಹೊಸ್ತಿಲಲ್ಲಿರುವುದು ಸಾಹಸವೇ ಸರಿ. ಸತತವಾಗಿ ಐದು ಪಂದ್ಯ ಗೆದ್ದು ಬೀಗುತ್ತಿರುವ ಆರ್ ಸಿಬಿ ಇಂದು ತವರಿನಲ್ಲಿ ಸಿಎಸ್ ಕೆಯನ್ನು ಎದುರಿಸಲಿದೆ. ಮೊದಲೇ ಈ ಎರಡು ತಂಡಗಳ ಪಂದ್ಯವೆಂದರೆ ಅಭಿಮಾನಿಗಳಲ್ಲಿ ಉತ್ಸಾಹ ಬೇರೆಯೇ ಲೆವೆಲ್ ನಲ್ಲಿರುತ್ತದೆ. ಅಂತಹದ್ದರಲ್ಲಿ ಇಂದು ಗೆಲುವು ಎರಡೂ ತಂಡಕ್ಕೆ ಅನಿವಾರ್ಯವಾಗಿರುವುದರಿಂದ ಪಂದ್ಯದ ಕಳೆ ಹೆಚ್ಚಿಸಿದೆ.
ಧೋನಿ ಮತ್ತು ಕೊಹ್ಲಿ ಮುಖಾಮುಖಿಯಾಗುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಆ ಗಳಿಗೆ ಇಂದು ಬರಲಿದೆ. ಆರ್ ಸಿಬಿಗೆ ಬಹುಶಃ ಈ ಹಿಂದೆ ಕೆಕೆಆರ್ ವಿರುದ್ಧ 1 ರನ್ ನಿಂದ ಸೋಲಾಗದೇ ಇರುತ್ತಿದ್ದರೆ ಇಂದು ಈ ಒತ್ತಡದ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಆ ಸೋಲು ಆರ್ ಸಿಬಿಯನ್ನು ಕಾಡಲಿದೆ.
ಒಂದು ವೇಳೆ ಈ ಪಂದ್ಯವನ್ನು ಗೆದ್ದರೆ ಅಭಿಮಾನಿಗಳು ಕಪ್ ಗೆದ್ದಷ್ಟೇ ಖುಷಿಪಡಲಿದ್ದಾರೆ. ಸದ್ಯಕ್ಕೆ ಆರ್ ಸಿಬಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಉತ್ಕೃಷ್ಟ ಮಟ್ಟದಲ್ಲಿದೆ. ಬೌಲಿಂಗ್ ನಲ್ಲಿ ಫರ್ಗ್ಯುಸನ್, ಯಶ್ ದಯಾಳ್ ಮತ್ತು ಮೊಹಮ್ಮದ್ ಸಿರಾಜ್ ತಂಡದ ಶಕ್ತಿಯಾಗಿದ್ದಾರೆ. ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ, ಫಾ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್ ಖ್ಯಾತಿಗೆ ತಕ್ಕ ಆಟವಾಡಬೇಕಿದೆ. ಇನ್ ಫಾರ್ಮ್ ಬ್ಯಾಟಿಗ ವಿಲ್ ಜ್ಯಾಕ್ಸ್ ಕೊರತೆ ತಂಡಕ್ಕೆ ಎದ್ದು ಕಾಣಲಿದೆ. ಅವರ ಸ್ಥಾನಕ್ಕೆ ತಂಡ ಯಾರಿಗೆ ಅವಕಾಶ ನೀಡಬಹುದು ಎಂಬ ಕುತೂಹಲವಿದೆ. ರಜತ್ ಪಟಿದಾರ್ ಕಳೆದ ಐದೂ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಇತ್ತ ಸಿಎಸ್ ಕೆ ತಂಡಕ್ಕೂ ಇಂದು ಪ್ಲೇ ಆಫ್ ಗೇರಲು ಗೆಲುವು ಅನಿವಾರ್ಯವಾಗಿದೆ. ಆದರೆ ಮಳೆ ಬಂದು ಪಂದ್ಯ ರದ್ದಾದರೆ ಚೆನ್ನೈ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಧೋನಿ ತಂಡದಲ್ಲಿದ್ದರೂ ಗಾಯಗೊಂಡು ಅನ್ ಫಿಟ್ ಆಗಿರುವುದರಿಂದ ಮೊದಲಿನಂತೆ ಬ್ಯಾಟ್ ಮಾಡಲಾಗುತ್ತಿಲ್ಲ. ಆದರೆ ಸಿಎಸ್ ಕೆ ತಂಡಕ್ಕೆ ಋತುರಾಜ್ ಗಾಯಕ್ ವಾಡ್, ರವೀಂದ್ರ ಜಡೇಜಾರಂತಹ ಪ್ರತಿಭಾವಂತರ ಬಲವಿದೆ. ಈ ಜಿದ್ದಾಜಿದ್ದಿನ ಪಂದ್ಯಕ್ಕೆ ಮಳೆ ಬಾರದೇ ಇದ್ದರೆ ಸಾಕು ಎಂದಷ್ಟೇ ಅಭಿಮಾನಿಗಳ ಪ್ರಾರ್ಥನೆಯಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.