ಮುಂಬೈ: ಇದೀಗ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಆಟಗಾರರು ತಮ್ಮ ಫ್ರಾಂಚೈಸಿ ಪರ ಹೇಗೆ ಆಡುತ್ತಿದ್ದಾರೆ ಎಂಬ ಬಗ್ಗೆ ಆಯ್ಕೆ ಸಮಿತಿ ಸೂಕ್ಷ್ಮವಾಗಿ ಅವಲೋಕನ ನಡೆಸುತ್ತಿದೆ.
ಐಪಿಎಲ್ ಮುಗಿದ ತಕ್ಷಣವೇ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಹೀಗಾಗಿ ವಿಶ್ವಕಪ್ ಗೆ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಐಪಿಎಲ್ ನಲ್ಲಿ ಆಟಗಾರರ ಪ್ರದರ್ಶನವನ್ನು ಆಯ್ಕೆ ಸಮಿತಿ ಗಮನಿಸುತ್ತಿದೆ. ಆ ಪ್ರಕಾರ ಕೆಲವು ಹಿರಿಯ ಆಟಗಾರರನ್ನೇ ಕೈ ಬಿಟ್ಟರೂ ಅಚ್ಚರಿಯಿಲ್ಲ.
ಮೂಲಗಳ ಪ್ರಕಾರ ಮುಂಬರುವ ಟಿ20 ವಿಶ್ವಕಪ್ ಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಯುವ ಆಟಗಾರರನ್ನೇ ಆಯ್ಕೆ ಮಾಡಲು ಚಿಂತನೆ ನಡೆಸಿದೆ. ಅನುಭವಿಯಾಗಿ ನಾಯಕ ರೋಹಿತ್ ಶರ್ಮಾ ಇರಲಿದ್ದಾರೆ. ಅವರ ಹೊರತಾಗಿ ಟಿ20 ಕ್ರಿಕೆಟ್ ನಲ್ಲಿ ಇತ್ತೀಚೆಗೆ ಮಿಂಚುತ್ತಿರುವ ಶಿವಂ ದುಬೆ, ಋತುರಾಜ್ ಗಾಯಕ್ ವಾಡ್, ಜಿತೇಶ್ ಶರ್ಮ, ರಿಂಕು ಸಿಂಗ್ ಮುಂತಾದ ಆಟಗಾರರನ್ನು ಆಯ್ಕೆ ಮಾಡಲು ಚಿಂತನೆ ನಡೆಸಿದೆ.
ಹೀಗಾದಲ್ಲಿ ಐಪಿಎಲ್ ನಲ್ಲಿ ತೀವ್ರ ಸಾಧಾರಣ ಪ್ರದರ್ಶನ ನೀಡುತ್ತಿರುವ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮತ್ತು ಅನುಭವಿ ವಿರಾಟ್ ಕೊಹ್ಲಿಗೂ ಕೊಕ್ ನೀಡುವ ಸಾಧ‍್ಯತೆಯಿದೆ. ಈ ಹಿಂದೆ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದ್ದು ಕಿರಿಯ ಆಟಗಾರರಿಂದಲೇ. ಹೀಗಾಗಿ ಈ ಬಾರಿಯೂ ಹಿರಿಯ ಆಟಗಾರರನ್ನು ಕಡೆಗಣಿಸಿ ಉತ್ಸಾಹಿ ಯುವ ಪ್ರತಿಭೆಗಳನ್ನು ಆರಿಸಲು ಆಯ್ಕೆ ಸಮಿತಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.