ಅನ್ ಸೋಲ್ಡ್ ಆಗಿದ್ದ ರಜತ್ ಪಾಟಿದಾರ್ ಆರ್ ಸಿಬಿ ಕ್ಯಾಪ್ಟನ್ ಆಗಿದ್ದು ಹೇಗೆ

Krishnaveni K

ಗುರುವಾರ, 13 ಫೆಬ್ರವರಿ 2025 (15:37 IST)
ಬೆಂಗಳೂರು: ಐಪಿಎಲ್ 2025 ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಹೊಸ ನಾಯಕನ ಘೋಷಣೆ ಮಾಡಿದೆ. ಯುವ ಬ್ಯಾಟಿಗ ರಜತ್ ಪಾಟಿದಾರ್ ಗೆ ನಾಯಕತ್ವ ನೀಡಿ ಅಚ್ಚರಿ ನೀಡಿದೆ. ಅನ್ ಸೋಲ್ಡ್ ಆಗಿದ್ದ ರಜತ್ ಈಗ ನಾಯಕನ ಪಟ್ಟಕ್ಕೇರಿದ್ದು ಹೇಗೆ ಇಲ್ಲಿದೆ ಒಂದು ನೋಟ.

ರಜತ್ ಪಾಟಿದಾರ್ ಎಂಬ ಹೆಸರು ಕಳೆದ ಐಪಿಎಲ್ ನಿಂದ ಸದ್ದು ಮಾಡುತ್ತಿದೆ. 2021 ರಲ್ಲಿ ಕಳಪೆ ಸಾಧನೆ ಮಾಡಿದ್ದರೆಂಬ ಕಾರಣಕ್ಕೆ ಅವರನ್ನು ತಂಡದಿಂದಲೇ ಕೈ ಬಿಡಲಾಗಿತ್ತು. ಹೀಗಾಗಿ 2022 ರಲ್ಲಿ ರಜತ್ ಅನ್ ಸೋಲ್ಡ್ ಆಗಿ ಉಳಿದವರು. ಹಾಗಿದ್ದರೂ ಆರ್ ಸಿಬಿ ಅವರನ್ನು ಟೂರ್ನಿಯ ಮಧ್ಯದಲ್ಲಿ ತಂಡಕ್ಕೆ ಖರೀದಿ ಮಾಡಿತು.

ಲುವ್ನಿತ್ ಸಿಸೋಡಿಯಾ ಎಂಬ ಆಟಗಾರ ಗಾಯಗೊಂಡಿದ್ದರಿಂದ ರಜತ್ ರನ್ನು ಅನಿವಾರ್ಯವಾಗಿ ಆರ್ ಸಿಬಿ ತಂಡಕ್ಕೆ ಸೇರಿಸಿಕೊಂಡಿತು. ಆದರೆ ಮರಳಿ ಬಂದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸಿಡಿಸಿದ ಸ್ಪೋಟಕ ಶತಕ ಅವರ ನಸೀಬು ಬದಲಾಯಿಸಿತು.

2024 ರಲ್ಲಿ ರಜತ್ ಪಾಟಿದಾರ್ ರನ್ನು ಆರ್ ಸಿಬಿ ತಂಡದಲ್ಲಿ ಉಳಿಸಿಕೊಂಡಿತು. ಫಾ ಡು ಪ್ಲೆಸಿಸ್ ರನ್ನು ತಂಡದಿಂದ ಕೈ ಬಿಟ್ಟಾಗ ವಿರಾಟ್ ಕೊಹ್ಲಿ ಮತ್ತೆ ನಾಯಕರಾಗಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಭವಿಷ್ಯದ ದೃಷ್ಟಿಯಿಂದ ಆರ್ ಸಿಬಿ ಯುವ ಕ್ರಿಕೆಟಿಗನನ್ನು ನಾಯಕನಾಗಿ ಮಾಡಿದೆ. ಮೂರು ಆವೃತ್ತಿ ಐಪಿಎಲ್ ಆಡಿರುವ ರಜತ್ 27 ಪಂದ್ಯಗಳಿಂದ 799 ರನ್ ಹೊಡೆದಿದ್ದಾರೆ. ಇದರಲ್ಲಿ ಒಂದು ಶತಕವೂ ಸೇರಿದೆ. ಇದೀಗ ನಾಯಕರಾಗಿ ಆರ್ ಸಿಬಿಯ ಕಪ್ ಗೆಲ್ಲುವ ಕನಸು ನನಸು ಮಾಡ್ತಾರಾ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ