IND vs AUS: ಇಂದಿನ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಟೀಂ ಇಂಡಿಯಾ ಕಪ್ ಗೆದ್ದಂತೆ

Krishnaveni K

ಮಂಗಳವಾರ, 4 ಮಾರ್ಚ್ 2025 (08:50 IST)
Photo Credit: X
ದುಬೈ: ಚಾಂಪಿಯನ್ಸ್ ಟ್ರೋಫಿ 2025 ಅಂತಿಮ ಘಟ್ಟಕ್ಕೆ ಬಂದಿದ್ದು ಇಂದು ಭಾರತ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯ ನಡೆಯಲಿದೆ. ಇಂದಿನ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಫೈನಲ್ ಗೆದ್ದಂತೇ ಎನ್ನುತ್ತಿದ್ದಾರೆ ಅಭಿಮಾನಿಗಳು.

ಐಸಿಸಿ ಟೂರ್ನಮೆಂಟ್ ಗಳಲ್ಲಿ ಆಸ್ಟ್ರೇಲಿಯಾವೇ ಭಾರತಕ್ಕೆ ಕಠಿಣ ಎದುರಾಳಿ. ಇದುವರೆಗೆ ನಡೆದ ಐಸಿಸಿ ಟೂರ್ನಿಯ ಫೈನಲ್ ಪಂದ್ಯಗಳಲ್ಲಿ ಎರಡು ಬಾರಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು. ಆಸೀಸ್ ವಿರುದ್ಧ ಆಡುವಾಗ ಭಾರತ ಯಾವತ್ತೂ ಒತ್ತಡಕ್ಕೆ ಒಳಗಾಗುತ್ತದೆ.

ಆದರೆ ಈ ಬಾರಿ ಸೆಮಿಫೈನಲ್ ನಲ್ಲೇ ಆಸೀಸ್ ಭಾರತಕ್ಕೆ ಎದುರಾಗಿದೆ. ಕಳೆದ ಏಕದಿನ ವಿಶ್ವಕಪ್ ನಲ್ಲಿ ಸತತವಾಗಿ ಗೆದ್ದುಕೊಂಡು ಬಂದಿದ್ದ ಟೀಂ ಇಂಡಿಯಾ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದನ್ನು ಯಾರೂ ಮರೆತಿಲ್ಲ. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ತಂಡಕ್ಕೆ ಇಂದು ಉತ್ತಮ ಅವಕಾಶವಾಗಿದೆ.

ಒಂದು ವೇಳೆ ಇಂದಿನ ಪಂದ್ಯವನ್ನು ಗೆದ್ದರೆ ಟೀಂ ಇಂಡಿಯಾ ಮಾನಸಿಕವಾಗಿ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ. ದುಬೈ ಪಿಚ್ ನಲ್ಲಿ ಟಾಸ್ ನಿರ್ಣಾಯಕವಾಗುತ್ತಿದೆ. ಮೊದಲು ಫೀಲ್ಡಿಂಗ್ ಮಾಡುವ ತಂಡವೇ ಮೇಲುಗೈ ಸಾಧಿಸುತ್ತಿದೆ. ಒಂದು  ವೇಳೆ ಮೊದಲು ಬ್ಯಾಟಿಂಗ್ ಮಾಡಿಯೂ ಗೆಲ್ಲಬೇಕೆಂದರೆ ಬೌಲರ್ ಗಳು ಮ್ಯಾಜಿಕ್ ಮಾಡಲೇಬೇಕು.

ದುಬೈ ಪಿಚ್ ಸ್ಪಿನ್ನರ್ ಗಳಿಗೆ ಸಹಕರಿಸುತ್ತಿರುವುದು ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಕಳೆದ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಐದು ವಿಕೆಟ್ ಕಿತ್ತು ಕಿವೀಸ್ ವಿರುದ್ಧ ನಂಬಲಸಾಧ್ಯ ಗೆಲುವು ಪಡೆಯಲು ಕಾರಣವಾಗಿದ್ದರು. ಮಿಸ್ಟರಿ ಸ್ಪಿನ್ನರ್ ಈಗ ಆಸ್ಟ್ರೇಲಿಯಾಗೂ ಕಡಿವಾಣ ಹಾಕಬೇಕಾಗಿದೆ. ವಿಶೇಷವಾಗಿ ಭಾರತದ ವಿರುದ್ಧ ಯಾವಾಗಲೂ ಭರ್ಜರಿ ಬ್ಯಾಟಿಂಗ್ ಮಾಡುವ ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಗೆ ಕಡಿವಾಣ ಹಾಕಿದರೆ ಸುಲಭವಾಗಿ ಗೆಲ್ಲಬಹುದು. ಜೊತೆಗೆ ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟಿಗರೂ ಇಂದು ಸಿಡಿದು ನಿಲ್ಲಬೇಕಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಟೀಂ ಇಂಡಿಯಾ ಕಣಕ್ಕಿಳಿಸುವುದು ಬಹುತೇಕ ನಿಶ್ಚಿತವಾಗಿದೆ. ಈ ಸೆಮಿಫೈನಲ್ ಹೋರಾಟ ಇಂದು ಮಧ್ಯಾಹ್ನ 2.30 ಕ್ಕೆ ಆರಂಭವಾಗಲಿದ್ದು, ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ