ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ 6 ರನ್ ಗಳಿಂದ ಗೆದ್ದುಕೊಂಡಿದೆ. ಅದರಲ್ಲೂ ಆ ಒಂದು ಯಾರ್ಕರ್ ನನ್ನು ಬಹುಶಃ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಜೀವನದಲ್ಲೇ ಮರೆಯಲ್ಲ.
ಗೆಲುವಿಗೆ 374 ರನ್ ಗಳ ಗುರಿ ಪಡೆದು ಮೈದಾನಕ್ಕಿಳಿದಿದ್ದ ಇಂಗ್ಲೆಂಡ್ ಇಂದು ಪಂದ್ಯ ಗೆದ್ದು ಸರಣಿಯನ್ನೂ ತನ್ನದಾಗಿಸಿಕೊಳ್ಳುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಕೊನೆಯ ದಿನದಲ್ಲಿ ಟೀಂ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಮ್ಯಾಜಿಕ್ ಮಾಡಿಬಿಟ್ಟರು.
ನಿನ್ನೆ 339 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ದಿನದಂತ್ಯ ಮಾಡಿದ್ದ ಇಂಗ್ಲೆಂಡ್ ಗೆ ಗೆಲ್ಲುವ ಎಲ್ಲಾ ಅವಕಾಶವಿತ್ತು. ಗಸ್ ಅಟ್ಕಿನ್ಸನ್ 17 ರನ್ ಗಳಿಸಿದ್ದು ಬಿಟ್ಟರೆ ಕೊನೆಯ ಕ್ರಮಾಂಕದ ಬ್ಯಾಟಿಗರೆಲ್ಲರೂ ಸಿಂಗಲ್ ಡಿಜಿಟ್ ಗೆ ಔಟಾದರು. ಕೊನೆಯ ನಾಲ್ಕೂ ವಿಕೆಟ್ ಗಳು ಸಿರಾಜ್-ಪ್ರಸಿದ್ಧ ಪಾಲಾಯಿತು. ಈ ಪೈಕಿ ಮೊಹಮ್ಮದ್ ಸಿರಾಜ್ 5 ವಿಕೆಟ್ ಪಡೆದರೆ ಪ್ರಸಿದ್ಧ 4 ವಿಕೆಟ್ ತಮ್ಮದಾಗಿಸಿಕೊಂಡರು.
ಒಂದು ಹಂತದಲ್ಲಿ 357 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದರೂ ಅಟ್ಕಿಸನ್ ಗೆಲುವು ಕಸಿದುಕೊಳ್ಳುವ ಭೀತಿಯಿತ್ತು. ಆದರೆ ಮೊಹಮ್ಮದ್ ಸಿರಾಜ್ ಅದ್ಭುತ ಯಾರ್ಕರ್ ಅವರನ್ನು ಬೌಲ್ಡ್ ಔಟ್ ಮಾಡುವಂತೆ ಮಾಡಿತು. ಬಹುಶಃ ಈ ಒಂದು ಎಸೆತವನ್ನು ಸಿರಾಜ್ ಎಂದಿಗೂ ಮರೆಯಲ್ಲ. ಈ ಗೆಲುವಿನೊಂದಿಗೆ ಭಾರತ ತೆಂಡುಲ್ಕರ್-ಆಂಡರ್ಸನ್ ಟ್ರೋಫಿಯನ್ನು 2-2 ರಿಂದ ಸಮಬಲಗೊಳಿಸಿದೆ. ಭಾರತ ತಂಡವಂತೂ ವಿಶ್ವಕಪ್ ಗೆದ್ದಂತೆ ಇಡೀ ಮೈದಾನಕ್ಕೆ ಸುತ್ತು ಬಂದು ಸಂಭ್ರಮಿಸಿದೆ.