ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದ ನಾಲ್ವರು ಸ್ಪಿನ್ನರ್ ಗಳು ಕಣಕ್ಕೆ

Krishnaveni K

ಗುರುವಾರ, 1 ಫೆಬ್ರವರಿ 2024 (08:21 IST)
ವಿಶಾಖಪಟ್ಟಣಂ: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಡುವ ಬಳಗದಲ್ಲಿ ಕೆಲವೊಂದು ಬದಲಾವಣೆ ನಿಶ್ಚಿತವಾಗಿದೆ.

ಮೊದಲ ಟೆಸ್ಟ್ ಪಂದ್ಯ ಸೋತಿರುವ ಅತಿಥೇಯರು ಈಗ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಕಮ್ ಬ್ಯಾಕ್ ಮಾಡುವ ಒತ್ತಡದಲ್ಲಿದ್ದಾರೆ. ಇದರ ನಡುವೆ ಸ್ಟಾರ್ ಆಟಗಾರರಾದ ಕೊಹ್ಲಿ, ಜಡೇಜಾ, ಕೆಎಲ್ ರಾಹುಲ್ ಅನುಪಸ್ಥಿತಿ ತಂಡಕ್ಕೆ ದೊಡ್ಡ ಚಿಂತೆಯಾಗಿದೆ. ಹಾಗಿದ್ದರೂ ಇದ್ದ ಸೌಲಭ್ಯ ಬಳಸಿಕೊಂಡು ಅತ್ಯುತ್ತಮ ತಂಡವನ್ನು ಆಯ್ಕೆ ಮಾಡುವುದು ರೋಹಿತ್-ದ್ರಾವಿಡ್ ಗೆ ಸವಾಲಿನ ಕೆಲಸವಾಗಲಿದೆ.

ನಾಲ್ವರು ಸ್ಪಿನ್ನರ್ ಗಳು ಕಣಕ್ಕೆ
ಮೊದಲ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಬಿಟ್ಟರೆ ಸ್ಪಿನ್ ಬೌಲರ್ ಗಳದ್ದೇ ಮೇಲುಗೈಯಾಗಿತ್ತು. ಇಂಗ್ಲೆಂಡ್ ತಂಡದಿಂದಲೂ ಸ್ಪಿನ್ನರ್ ಗಳೇ ಮಿಂಚಿದ್ದರು. ಹೀಗಾಗಿ ಭಾರತ ಈ ಪಂದ್ಯಕ್ಕೆ ಸ್ಪಿನ್ ಅಸ್ತ್ರವನ್ನೇ ಬಳಸಲು ಮುಂದಾಗಿದೆ. ಜಡೇಜಾ ಹೊರಗುಳಿದರೂ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಕಣಕ್ಕಿಳಿಯಲಿದ್ದಾರೆ. ಅವರ ಜೊತೆಗೆ ಸೌರಭ್ ಕುಮಾರ್ ಗೂ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್ ಕೀಳಲು ವಿಫಲರಾಗಿದ್ದರು. ಹೀಗಾಗಿ ಅವರನ್ನು ಹೊರಗಿಟ್ಟರೂ ಅಚ್ಚರಿಯಿಲ್ಲ. ಒಂದು ವೇಳೆ ಭಾರತ ನಾಲ್ವರು ಸ್ಪಿನ್ನರ್ ಗಳನ್ನು ಕಣಕ್ಕಿಳಿಸಿದರೆ ನಾವೂ ನಾಲ್ವರು ಸ್ಪಿನ್ನರ್ ಗಳನ್ನು ಕಣಕ್ಕಿಳಿಸಲು ಹಿಂದೆ ಮುಂದೆ ನೋಡಲ್ಲ ಎಂದು ಇಂಗ್ಲೆಂಡ್ ಕೂಡಾ ಹೇಳಿದೆ. ಹೀಗಾಗಿ ಎರಡನೇ ಪಂದ್ಯಕ್ಕೆ ಎರಡೂ ತಂಡಗಳಿಗೆ ಸ್ಪಿನ್ ಪ್ರಮುಖ ಅಸ್ತ್ರವಾಗಲಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಕೂಡಾ ಕೈಕೊಟ್ಟಿತ್ತು. ಹೀಗಾಗಿ ಪ್ರಮುಖರ ಅನುಪಸ್ಥಿತಿಯಲ್ಲಿ ಬ್ಯಾಟಿಗರೂ ಜವಾಬ್ಧಾರಿಯುತವಾಗಿ ಆಡಬೇಕಿದೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಸರಿಯಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ