ಸಭ್ಯತೆ ಮೀರಿದ್ದಕ್ಕೆ ಜಸ್ಪ್ರೀತ್ ಬುಮ್ರಾಗೆ ವಾಗ್ದಂಡನೆ

Krishnaveni K

ಮಂಗಳವಾರ, 30 ಜನವರಿ 2024 (11:19 IST)
ಹೈದರಾಬಾದ್: ಟೀಂ ಇಂಡಿಯಾ ಉಪನಾಯಕ, ವೇಗಿ ಜಸ್ಪ್ರೀತ್ ಬುಮ್ರಾಗೆ ಎಲ್ಲೆ ಮೀರಿ ವರ್ತಿಸಿದ್ದಕ್ಕೆ ಐಸಿಸಿ ವಾಗ್ದಂಡನೆ ಶಿಕ್ಷೆ ನೀಡಿದೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಜಸ್ಪ್ರೀತ್ ಬುಮ್ರಾ ಬೇಕೆಂದೇ ಎದುರಾಳಿ ಬ್ಯಾಟಿಗನಿಗೆ ರನ್ ಗಾಗಿ ಓಡುವಾಗ ಅಡ್ಡಿಪಡಿಸಿದ್ದರು. ಅವರ ಈ ವರ್ತನೆಗೆ ವಾಗ್ದಂಡನೆ ಶಿಕ್ಷೆ ಜೊತೆಗೆ ಒಂದು ಡಿಮೆರಿಟ್ ಅಂಕವನ್ನೂ ನೀಡಲಾಗಿದೆ. ವಿಚಾರಣೆ ವೇಳೆ ಬುಮ್ರಾ ತಪ್ಪೊಪ್ಪಿಕೊಂಡಿದ್ದರು. ಜೊತೆಗೆ ಕಳೆದ ಆರು ತಿಂಗಳ ಅವಧಿಯಲ್ಲಿ ಇಂತಹ ತಪ್ಪು ಮಾಡದೇ ಇರುವ ಕಾರಣಕ್ಕೆ ವಾಗ್ದಂಡನೆಗೆ ಶಿಕ್ಷೆ ಸೀಮಿತಗೊಳಿಸಲಾಗಿದೆ.

ಇಂಗ್ಲೆಂಡ್ ಬ್ಯಾಟಿಗ ಒಲಿ ಪಾಪ್ ಬೇಕೆಂದೇ ಬುಮ್ರಾ ದಾರಿಗೆ ಅಡ್ಡಗಟ್ಟಿದ್ದಲ್ಲದೆ, ಅವರ ಮೈಗೆ ಮೈ ತಾಕಿಸಿ ತಡೆಯುವ ಯತ್ನ ನಡೆಸಿದ್ದಾರೆ. ಇಂಗ್ಲೆಂಡ್ ಬ್ಯಾಟಿಂಗ್ ಮಾಡುತ್ತಿದ್ದಾಗ ದ್ವಿತೀಯ ಇನಿಂಗ್ಸ್ ನ 81 ನೇ ಓವರ್ ನಲ್ಲಿ ಈ ಘಟನೆ ನಡೆದಿತ್ತು. ಫಾಲೋ ಥ್ರೋ ಪೂರ್ಣಗೊಳಿಸಿದ ಬಳಿಕ ಪಾಪ್ ಗೆ ಸೂಕ್ತವಲ್ಲದ ದೈಹಿಕ ಸಂಪರ್ಕಕ್ಕೆ ಕಾರಣವಾಗಿದ್ದಕ್ಕೆ ಬುಮ್ರಾಗೆ ಒಂದು ಡಿಮೆರಿಟ್ ಅಂಕ ಶಿಕ್ಷೆ ವಿಧಿಸುತ್ತಿರುವುದಾಗಿ ಐಸಿಸಿ ಪ್ರಕಟಿಸಿದೆ.

ಮ್ಯಾಚ್ ರೆಫರಿ ರಿಚಿ ರಿಚರ್ಡಸನ್ ಮುಂದೆ ವಿಚಾರಣೆಗೆ ಹಾಜರಾದಾಗ ಬುಮ್ರಾ ಮರು ಮಾತಿಲ್ಲದೇ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲವೆಂದು ರೆಫರಿ ತೀರ್ಮಾನಕ್ಕೆ ಬಂದಿದ್ದಾರೆ.  ಮೈದಾನದ ಅಂಪಾಯರ್ ಗಳಾದ ಪಾಲ್ ರೀಫೇಲ್, ಕ್ರಿಸ್ ಗಫಾನಿ, ಮರೈಸ್ ಎರಾಸ್ಮಸ್ ಮತ್ತು ನಾಲ್ಕನೇ ಅಂಪಾಯರ್ ರೋಹನ್ ಪಂಡಿತ್ ಬುಮ್ರಾ ವಿರುದ್ಧ ಆರೋಪ ಸಲ್ಲಿಸಿದ್ದರು.

ಕಳೆದ ಪಂದ್ಯವನ್ನು ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಹೊಂದಿಯೂ 28 ರನ್ ಗಳಿಂದ ಸೋತು ಮುಖಭಂಗ ಅನುಭವಿಸಿತ್ತು. ಇದೀಗ ಎರಡನೇ ಟೆಸ್ಟ್ ಪಂದ್ಯ ವಿಶಾಖಪಟ್ಟಣಂನಲ್ಲಿ ಫೆಬ್ರವರಿ 2 ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಸ್ಟಾರ್ ಆಟಗಾರರಾದ ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಗಾಯದಿಂದಾಗಿ ಹೊರಗುಳಿದಿದ್ದಾರೆ. ವಿರಾಟ್ ಕೊಹ್ಲಿ ಈಗಾಗಲೇ ಎರಡು ಪಂದ್ಯಕ್ಕೆ ಅಲಭ‍್ಯರಾಗುವುದಾಗಿ ತಿಳಿಸಿದ್ದರು. ಅವರ ಸ್ಥಾನಕ್ಕೆ ಸೌರಭ್ ಕುಮಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ