ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್ 231 ರನ್ ಗಳ ಗುರಿ ನೀಡಿದೆ.
ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 236 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತ ಮೊದಲ ಇನಿಂಗ್ಸ್ ನಲ್ಲಿ 436 ರನ್ ಗಳಿಸಿತ್ತು. 190 ರನ್ ಗಳ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 420 ರನ್ ಗಳಿಗೆ ಆಲೌಟ್ ಆಗಿತ್ತು. ಇದರಿಂದಾಗಿ ಭಾರತಕ್ಕೆ ಗೆಲ್ಲಲು 231 ರನ್ ಗಳ ಗುರಿ ಸಿಕ್ಕಿತ್ತು. ಇತ್ತೀಚೆಗಿನ ವರದಿ ಬಂದಾಗ ಭಾರತ ದ್ವಿತೀಯ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 38 ರನ್ ಗಳಿಸಿದೆ. ರೋಹಿತ್ ಶರ್ಮಾ 23, ಯಶಸ್ವಿ ಜೈಸ್ವಾಲ್ 11 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇದಕ್ಕೆ ಮೊದಲು ದ್ವಿತೀಯ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಪರ ಒಲಿ ಪಾಪ್ 196 ರನ್ ಗಳಿಸಿ ಔಟಾದರು. ಭಾರತದ ಮೊದಲ ಇನಿಂಗ್ಸ್ ನಲ್ಲಿ ಮೂವರು ಶತಕ ವಂಚಿತರಾಗಿದ್ದರು. ಬಹುಶಃ ಇದಕ್ಕೆ ಸೇಡು ಏನೋ ಎಂಬಂತೆ ಪಾಪ್ ರನ್ನು ದ್ವಿಶತಕದ ಅಂಚಿನಲ್ಲಿ ಬುಮ್ರಾ ಔಟ್ ಮಾಡಿದರು.
ವಿಶೇಷವೆಂದರೆ ಈ ಪಿಚ್ ಮೊದಲ ಇನಿಂಗ್ಸ್ ನಲ್ಲಿ ಸ್ಪಿನ್ನರ್ ಗಳಿಗೆ ನೆರವಾಗಿತ್ತು. ಹಾಗಿದ್ದರೂ ದ್ವಿತೀಯ ಇನಿಂಗ್ಸ್ ನಲ್ಲಿ ಸ್ಪಿನ್ನರ್ ಗಳು ವಿಕೆಟ್ ಕೀಳಲು ಕೊಂಚ ಹೆಣಗಾಡಬೇಕಾಯಿತು. ಈ ಸಂದರ್ಭದಲ್ಲಿ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರು.
ಉಳಿದಂತೆ ರವಿಚಂದ್ರನ್ ಅಶ್ವಿನ್ 3, ರವೀಂದ್ರ ಜಡೇಜಾ 2, ಅಕ್ಷರ್ ಪಟೇಲ್ 1 ವಿಕೆಟ್ ಕಬಳಿಸಿದರು. ಇಂದು ಪಂದ್ಯದ ನಾಲ್ಕನೇ ದಿನವಾಗಿದ್ದು, ಗೆಲ್ಲಲು ಭಾರತ ಇನ್ನೂ 193 ರನ್ ಗಳಿಸಬೇಕಾಗಿದೆ.