ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ ಬೃಹತ್ ಮುನ್ನಡೆಯತ್ತ ಸಾಗಿದೆ.
ಒಲಿ ಪಾಪ್ ದಿಟ್ಟ ಹೋರಾಟ ನಡೆಸುತ್ತಿದ್ದು 190 ರನ್ ಗಳಿಸಿದ್ದು ದ್ವಿಶತಕದತ್ತ ದಾಪುಗಾಲಿಟ್ಟಿದೆ. ಇತ್ತೀಚೆಗಿನ ವರದಿ ಬಂದಾಗ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 412 ರನ್ ಗಳಿಸಿದೆ. ಒಲಿ ಪಾಪ್ ಗೆ ಸಾಥ್ ನೀಡುತ್ತಿರುವ ಟಾಮ್ ಹಾರ್ಟ್ಲೀ 28 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 246 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 436 ರನ್ ಗಳಿಸಿ ಆಲೌಟ್ ಆಗಿತ್ತು. ಇದರೊಂದಿಗೆ 190 ರನ್ ಗಳ ಮುನ್ನಡೆ ಪಡೆಯಿತು.
ಹೀಗಾಗಿ ಭಾರತ ಸುಲಭವಾಗಿ ಈ ಪಂದ್ಯವನ್ನು ಗೆಲ್ಲಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಭಾರತಕ್ಕೆ ಬಂಡೆಯಂತೆ ಕಾಡುತ್ತಿರುವುದು ಒಲಿ ಪಾಪ್. ಅವರ ಹೋರಾಟದಿಂದಾಗಿ ಇಂಗ್ಲೆಂಡ್ ಇದೀಗ 222 ರನ್ ಗಳ ಮುನ್ನಡೆ ಸಾಧಿಸಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡದೇ ಇದ್ದರೆ ಸೋಲಾದರೂ ಅಚ್ಚರಿಯಿಲ್ಲ.
ಭಾರತದ ಪರ ಇದುವರೆಗೆ ಜಸ್ಪ್ರೀತ್ ಬುಮ್ರಾ 3, ರವಿಚಂದ್ರನ್ ಅಶ್ವಿನ್ 2, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಕಬಳಿಸಿದ್ದಾರೆ. ಮೊಹಮ್ಮದ್ ಸಿರಾಜ್ ವಿಕೆಟ್ ಕೀಳಲು ವಿಫಲರಾಗಿದ್ದು, ಭಾರತಕ್ಕೆ ದೊಡ್ಡ ಮೈನಸ್ ಪಾಯಿಂಟ್ ಆಗಿದೆ.