ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 246 ರನ್ ಗಳಿಗೆ ಆಲೌಟ್ ಆಗಿದ್ದು, ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಭರ್ಜರಿ ಆರಂಭ ಪಡೆದಿದೆ.
ಮೊದಲ ದಿನವಾದ ಇಂದು ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 64.3 ಓವರ್ ಗಳಲ್ಲಿ 246 ರನ್ ಗಳಿಗೆ ಆಲೌಟ್ ಆಯಿತು. ಡಕೆಟ್ 35, ಬೇರ್ ಸ್ಟೋ 37 ರನ್ ಗಳಿಸಿದರು. ಆದರೆ ನಾಯಕನ ಆಟವಾಡಿದ ಬೆನ್ ಸ್ಟೋಕ್ಸ್ 88 ಎಸೆತಗಳಿಂದ 70 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ನ ಹೀರೋ ಆದರು. ಕೊನೆಯಲ್ಲಿ ಟಾಮ್ ಹಾರ್ಟ್ಲೀ 23 ರನ್ ಗಳ ಕೊಡುಗೆ ನೀಡಿದರು. ಇದರಿಂದಾಗಿ ಇಂಗ್ಲೆಂಡ್ ಗೌರವಯುತ ಮೊತ್ತ ಪೇರಿಸಲು ಸಾಧ‍್ಯವಾಯಿತು.
ಭಾರತದ ಪರ ಆರಂಭದಿಂದಲೂ ಸ್ಪಿನ್ನರ್ ಗಳೇ ಮೇಲುಗೈ ಸಾಧಿಸಿದರು. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಜೋಡಿ ಎಂದಿನಂತೆ ಪೈಪೋಟಿಗೆ ಬಿದ್ದವರಂತೆ ಬೌಲಿಂಗ್ ಮಾಡಿ ತಲಾ 3 ವಿಕೆಟ್ ಕಬಳಿಸಿದರು. ಇನ್ನೊಂದಡೆಯಿಂದ ತಕ್ಕ ಸಾಥ್ ನೀಡಿದ ಸ್ಪಿನ್ನರ್ ಅಕ್ಷರ್ ಪಟೇಲ್ 2 ವಿಕೆಟ್ ತಮ್ಮದಾಗಿಸಿಕೊಂಡರು. ಉಳಿದ ಎರಡು ವಿಕೆಟ್ ಜಸ್ಪ್ರೀತ್ ಬುಮ್ರಾ ಪಾಲಾಯಿತು. ಆದರೆ ಮೊಹಮ್ಮದ್ ಸಿರಾಜ್ ವಿಕೆಟ್ ಸಿಗದೇ ನಿರಾಸೆ ಅನುಭವಿಸಿದರು.
ಈ ಮೊತ್ತ ಬೆನ್ನತ್ತಿರುವ ಟೀಂ ಇಂಡಿಯಾ ಆರಂಭದಿಂದಲೇ ಬಿರುಸಾಗಿ ರನ್ ಗಳಿಸಲು ಆರಂಭಿಸಿದೆ. ಯಶಸ್ವಿ ಜೈಸ್ವಾಲ್ ಆರಂಭದಲ್ಲೇ ಬೌಂಡರಿ, ಸಿಕ್ಸರ್ ಮೂಲಕ ಏಕದಿನ ಮಾದರಿಯಲ್ಲಿ ಬ್ಯಾಟ್ ಬೀಸಿದರು. ಇದರಿಂದಾಗಿ ತಂಡ 8 ಓವರ್ ಗಳಲ್ಲಿ 50 ರನ್ ದಾಟಿದೆ. 7.18 ಸರಾಸರಿಯಲ್ಲಿ ರನ್ ಗಳಿಸುತ್ತಿರುವುದು ಟೀಂ ಇಂಡಿಯಾ ಅಬ್ಬರಕ್ಕೆ ಸಾಕ್ಷಿ. ಜೈಸ್ವಾಲ್ ಇದುವರೆಗೆ 39 ಎಸೆತ ಎದುರಿಸಿದ್ದು 2 ಸಿಕ್ಸರ್, 5 ಬೌಂಡರಿ ನೆರವಿನಿಂದ 41 ರನ್ ಗಳಿಸಿದ್ದರೆ ನಾಯಕ ರೋಹಿತ್ ಶರ್ಮಾ 14 ಎಸೆತಗಳಿಂದ 19 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 63 ರನ್ ಗಳಿಸಿದೆ. ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 183 ರನ್ ಗಳ ಅಗತ್ಯವಿದೆ.