ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೊಸ ಇತಿಹಾಸ ನಿರ್ಮಿಸಲು ಹೊರಟಿದೆ.
ಇಂಗ್ಲೆಂಡ್ ಈ ಪಂದ್ಯವನ್ನು ಬೇಝ್ ಬಾಲ್ ಮಾದರಿಯಲ್ಲಿ ಆಡುತ್ತಿದೆ. ಅಂದರೆ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್ ಗೆ ವಿರುದ್ಧವಾಗಿ ಸೀಮಿತ ಓವರ್ ಗಳ ಶೈಲಿಯಲ್ಲಿ ಬೀಡು ಬೀಸಾದ ಬ್ಯಾಟಿಂಗ್ ಮಾಡುತ್ತಾ ಆಕ್ರಮಣಕಾರೀ ಆಟವಾಡುತ್ತಿದೆ. ಈ ರೀತಿ ಬೇಝ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಇದುವರೆಗೆ ಎದುರಾಳಿ ತಂಡಗಳು ಸೋತಿದ್ದೇ ಹೆಚ್ಚು. ಆದರೆ ಭಾರತ ತಂಡ ಈಗ ಬೇಝ‍್ ಬಾಲ್ ಸರಣಿಯನ್ನು ಗೆದ್ದ ಮೊದಲ ತಂಡ ದಾಖಲೆ ಮಾಡಲು ಹೊರಟಿದೆ.
ಕಳೆದ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದು, ಭರ್ಜರಿ ಜಯ ಕಂಡುಕೊಂಡಿದೆ. ಇದರಿಂದಾಗಿ ಸರಣಿಯಲ್ಲಿ 2-1 ರಿಂದ ಮುನ್ನಡೆಯಲ್ಲಿದೆ. ಇಂಗ್ಲೆಂಡ್ ಗೆ ಬೇಝ್ ಬಾಲ್ ಮಾದರಿ ಆಟ ಕೈ ಕೊಟ್ಟಿದೆ. ಆದರೆ ಭಾರತ ತನ್ನದೇ ಶೈಲಿಯಲ್ಲಿ ಆಟವಾಡಿ ಎದುರಾಳಿಗಳ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ.
ರಾಂಚಿಯಲ್ಲಿ ಅಪ್ಪಟ ಸ್ಪಿನ್ ಪಿಚ್ ಮಾಡಲಾಗಿದ್ದು, ನಾಲ್ಕನೇ ಸರದಿಯಲ್ಲಿ ಬ್ಯಾಟಿಂಗ್ ಕಷ್ಟವಾಗಲಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಬಹುದು. ಭಾರತ ತಂಡದಲ್ಲಿ ಈ ಪಂದ್ಯಕ್ಕೆ ಕೆಲವು ಬದಲಾವಣೆಯಾಗಲಿದೆ. ಜಸ್ಪ್ರೀತ್ ಬುಮ್ರಾ ಹೊರಗುಳಿದಿರುವುದರಿಂದ ಮುಕೇಶ್ ಕುಮಾರ್ ಮತ್ತೆ ತಂಡದಲ್ಲಿ ಸ್ಥಾನ ಪಡೆಯಬಹುದು. ಬ್ಯಾಟಿಂಗ್ ನಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಅವಕಾಶ ಪಡೆದಿದ್ದ ರಜತ್ ಪಟಿದಾರ್ ಲೆಕ್ಕ ಭರ್ತಿಗೆ ಮಾತ್ರ ಎನ್ನುವಂತಿದ್ದರು. ಹೀಗಾಗಿ ಅವರ ಸ್ಥಾನಕ್ಕೆ ಕನ್ನಡಿಗ ದೇವದತ್ತ್ ಪಡಿಕ್ಕಲ್ ಗೆ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಸಾಧ‍್ಯತೆಯಿಲ್ಲ. ಈ ಪಂದ್ಯ 9.30 ಕ್ಕೆ ಆರಂಭವಾಗಲಿದ್ದು, ಜಿಯೋ ಸಿನಿಮಾದಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.