ಹರಾರೆ: ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟಿ20 ಪಂದ್ಯವನ್ನು ಆಘಾತಕಾರಿಯಾಗಿ ಸೋತ ಟೀಂ ಇಂಡಿಯಾ ಆಘಾತ ಅನುಭವಿಸಿದೆ. ಈ ಪಂದ್ಯವನ್ನು ಟೀಂ ಇಂಡಿಯಾ 13 ರನ್ ಗಳಿಂದ ಸೋತಿದೆ.
ಈ ಸೋಲಿನೊಂದಿಗೆ ಇತ್ತೀಚೆಗಿನ ಟಿ20 ವಿಶ್ವಕಪ್ ಕೂಟವೂ ಸೇರಿ ಸತತವಾಗಿ 12 ಪಂದ್ಯಗಳಿಂದ ಗೆಲ್ಲುತ್ತಾ ಬಂದಿದ್ದ ಟೀಂ ಇಂಡಿಯಾದ ಗೆಲುವಿನ ಸರಪಳಿ ಮುರಿದುಬಿದ್ದಂತಾಗಿದೆ. ಅಲ್ಲದೆ ಈ ವರ್ಷ ಟಿ20 ಯಲ್ಲಿ ಭಾರತ ಕಂಡ ಮೊದಲ ಸೋಲಾಗಿದೆ. ಅದೂ ವಿಶ್ವ ಚಾಂಪಿಯನ್ ಆದ ಬೆನ್ನಲ್ಲೇ ಭಾರತ ಇಂತಹದ್ದೊಂದು ಮುಖಭಂಗ ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್ ದಾಳಿಗೆ ತತ್ತರಿಸಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೊತ್ತವನ್ನು ಭಾರತದ ಪ್ರತಿಭಾವಂತ ಯುವ ಬ್ಯಾಟಿಗರು ಸುಲಭವಾಗಿ ಬೆನ್ನತ್ತಬಹುದು ಎಂದೇ ಎಲ್ಲರ ನಿರೀಕ್ಷೆಯಾಗಿತ್ತು.
ಆದರೆ ಭಾರತದ ಟಾಪ್ ಆರ್ಡರ್ ಕೈ ಕೊಟ್ಟಿದ್ದರಿಂದ ಎಲ್ಲಾ ಲೆಕ್ಕಾಚಾರಗಳೂ ಉಲ್ಟಾ ಆಯಿತು. ನಾಯಕ ಶುಬ್ಮನ್ ಗಿಲ್ 31, ವಾಷಿಂಗ್ಟನ್ ಸುಂದರ್ 27 ರನ್, ಆವೇಶ್ ಖಾನ್ 16 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲರದ್ದು ಏಕಂಕಿ ಕೊಡುಗೆ. ಜಿಂಬಾಬ್ವೆ ಪರ ತೆಂಡೈ ಚತರ, ನಾಯಕ ಸಿಕಂದರ್ ರಾಝಾ ತಲಾ 3 ವಿಕೆಟ್ ಕಬಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ 19.5 ಓವರ್ ಗಳಲ್ಲಿ 102 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.