ಮುಂಬೈ: ಟಿ20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ನಿನ್ನೆ ಸಂಜೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಭಾವುಕರಾದರು.
ವಾಂಖೆಡೆ ಮೈದಾನದ ಕಾರ್ಯಕ್ರಮಕ್ಕೆ ಮುನ್ನ ಬೃಹತ್ ರೋಡ್ ಶೋ ಏರ್ಪಡಿಸಲಾಗಿತ್ತು. ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಮುಂಬೈ ಬೀದಿಯಲ್ಲಿ ಅಭಿಮಾನಿಗಳು ಸೇರಿದ್ದರು. ವಿಶೇಷ ಬಸ್ ನಲ್ಲಿ ಟೀಂ ಇಂಡಿಯಾ ಪಡೆ ಟ್ರೋಫಿ ಹಿಡಿದುಕೊಂಡು ಮೆರವಣಿಗೆ ಮಾಡಿತ್ತು. ಈ ವೇಳೆ ರೋಹಿತ್ ಶರ್ಮಾ ಭಾವುಕರಾದರು. ತಮಗಾಗಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದು ನೋಡಿ ಕ್ರಿಕೆಟಿಗರು ಅಭಿಮಾನಿಗಳತ್ತ ಧನ್ಯವಾದ ಸಲ್ಲಿಸಿದರು.
ಆದರೆ ವಾಂಖೆಡೆ ಮೈದಾನದಲ್ಲಿ ಹಾರ್ದಿಕ್ ಪಾಂಡ್ಯ ಭಾವುಕರಾದರು. ಈ ಹಿಂದೆ ಐಪಿಎಲ್ ಆಡುವಾಗ ಇದೇ ವಾಂಖೆಡೆ ಮೈದಾನದಲ್ಲಿ ರೋಹಿತ್ ಶರ್ಮಾರಿಂದ ನಾಯಕತ್ವ ಕಿತ್ತುಕೊಂಡಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಪದೇ ಪದೇ ಪ್ರೇಕ್ಷಕರು ಮೂದಲಿಸುವ ಮೂಲಕ ಅವಮಾನ ಮಾಡಿದ್ದರು. ಆಗೆಲ್ಲಾ ಅವರು ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದರು.
ಈ ಟಿ20 ವಿಶ್ವಕಪ್ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಕೊಡುಗೆ ಪ್ರಮುಖವಾದುದು. ಹೀಗಾಗಿ ಅವರು ಕಪ್ ಎತ್ತಿಕೊಂಡು ಅದೇ ವಾಂಖೆಡೆ ಮೈದಾನದಲ್ಲಿ ಸುತ್ತು ಹೊಡೆದಾಗ ಅದೇ ಪ್ರೇಕ್ಷಕರು ಅವರನ್ನು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ. ಎಲ್ಲಿ ಅವಮಾನವಾಗಿತ್ತೋ ಅಲ್ಲೇ ಸನ್ಮಾನವಾಗುತ್ತಿರುವುದು ನೋಡಿ ಹಾರ್ದಿಕ್ ಕೊಂಚ ಭಾವುಕರಾದಂತೆ ಕಂಡುಬಂದರು.