IND vs ZIM: ಇಂದು ಅಂತಿಮ ಪಂದ್ಯಕ್ಕೆ ಸಜ್ಜಾದ ಶುಬ್ನನ್ ಗಿಲ್ ಪಡೆ

Krishnaveni K

ಭಾನುವಾರ, 14 ಜುಲೈ 2024 (11:33 IST)
ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಇಂದು ನಡೆಯಲಿದೆ. ಈಗಾಗಲೇ ಟೀಂ ಇಂಡಿಯಾ ಸರಣಿ ಗೆದ್ದಿರುವುದರಿಂದ ಈ ಪಂದ್ಯ ಔಪಚಾರಿಕವಾಗಿದೆ.

ಒಟ್ಟು ಐದು ಪಂದ್ಯಗಳ ಸರಣಿಯಲ್ಲಿ ಭಾರತ 3-1 ರಿಂದ ಮುನ್ನಡೆ ಸಾಧಿಸಿದೆ. ಒಂದು ವೇಳೆ ಇಂದು ಸೋತರೂ ಸರಣಿ ಕಳೆದುಕೊಳ್ಳದು. ಆದರೆ ಭಾರತ ಗೆಲುವಿನೊಂದಿಗೇ ಸರಣಿ ಮುಗಿಸಲು ಪ್ರಯತ್ನಿಸಲಿದೆ. ಈ ಪಂದ್ಯ ಔಪಚಾರಿಕವಾಗಿರುವುದರಿಂದ ಇಂದಿನ ಪಂದ್ಯದಲ್ಲಿ ಬದಲಾವಣೆ ನಿರೀಕ್ಷಿತವಾಗಿದೆ.

ನಿನ್ನೆಯಷ್ಟೇ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್ ಗಳ ಭರ್ಜರಿ ಗೆಲುವು ಕಂಡಿತ್ತು ಅದೇ ಲಯದಲ್ಲಿ ಭಾರತೀಯ ಬ್ಯಾಟಿಗರು ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದ್ದಾರೆ. ಈ ಸರಣಿಯ ಆರಂಭಿಕ ಪಂದ್ಯವನ್ನು ಗೆದ್ದಿದ್ದ ಜಿಂಬಾಬ್ವೆ ಬಳಿಕ ಭಾರತದ ಯುವ ಪಡೆ ಎದುರು ಮೇಲೇಳಲೇ ಇಲ್ಲ.

ಟೀಂ ಇಂಡಿಯಾಕ್ಕೆ ಈ ಸರಣಿಯಲ್ಲಿ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅಭಿಷೇಕ್ ಶರ್ಮ. ಸಿಕ್ಕ ಚೊಚ್ಚಲ ಅವಕಾಶದಲ್ಲೇ ಶತಕ ಸಿಡಿಸಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವ ಪ್ರತಿಭೆ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾಕ್ಕೆ ದೊಡ್ಡ ಆಸ್ತಿಯಾಗಬಹುದು. ಆದರೆ ಕಳೆದ ಪಂದ್ಯದಲ್ಲಿ ಅಭಿಷೇಕ್ ಗೆ ಆರಂಭಿಕರಾಗಿ ಕಣಕ್ಕಿಳಿಯುವ ಅವಕಾಶ ಸಿಗಲಿಲ್ಲ. ಈ ಪಂದ್ಯದಲ್ಲಿ ಅವರು ಮತ್ತೆ ಆರಂಭಿಕರಾಗಬಹುದು. ಉಳಿದಂತೆ ತಂಡದಲ್ಲಿ ಅವಕಾಶ ಸಿಕ್ಕರೂ ಸಂಜು ಸ್ಯಾಮ್ಸನ್ ಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲೇ ಇಲ್ಲ. ಹೀಗಾಗಿ ಅವರಿಗೂ ಮುಂಬಡ್ತಿ ನೀಡಿದರೂ ಅಚ್ಚರಿಯಿಲ್ಲ. ಬೌಲಿಂಗ್ ನಲ್ಲೂ ಆವೇಶ್ ಖಾನ್ ಮತ್ತೆ ತಂಡದಲ್ಲಿ ಸ್ಥಾನ ಪಡೆಯಬಹುದು. ವಾಷಿಂಗ್ಟನ್ ಸುಂದರ್ ಈ ಸರಣಿಯಲ್ಲಿ ಎಲ್ಲಾ ಪಂದ್ಯಗಳಲ್ಲೂ ಅದ್ಭುತವಾಗಿ ಬೌಲಿಂಗ್ ನಡೆಸಿದ್ದಾರೆ. ಇಂದಿನ ಈ ಪಂದ್ಯ ಸಂಜೆ 4.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ