ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ತಾನು ಈ ಹಿಂದಿನ ಕೋಚ್ ರಾಹುಲ್ ದ್ರಾವಿಡ್ ರಂತಲ್ಲ ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ.
ಇತ್ತೀಚೆಗಷ್ಟೇ ಗೌತಮ್ ಗಂಭೀರ್ ರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಬಿಸಿಸಿಐ ಘೋಷಣೆ ಮಾಡಿತ್ತು. ಈ ಮೊದಲು ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ನೂತನ ಕೋಚ್ ನ್ನು ಆಯ್ಕೆ ಮಾಡಿತ್ತು. ಅದರಂತೆ ಗಂಭೀರ್ ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಆದರೆ ಅವರು ಇನ್ನೂ ತಂಡದಲ್ಲಿ ಅಧಿಕಾರ ಸ್ವೀಕರಿಸಿಲ್ಲ. ಈ ತಿಂಗಳ ಅಂತ್ಯಕ್ಕೆ ಶ್ರೀಲಂಕಾ ವಿರುದ್ಧ ನಡೆಯಲಿರುವ ಸರಣಿ ಅವರ ಪಾಲಿಗೆ ಮೊದಲ ಸರಣಿಯಾಗಲಿದೆ. ಆದರೆ ಈ ಸರಣಿಗೂ ಮೊದಲೇ ಗಂಭೀರ್ ಆಟಗಾರರಿಗೆ ಸ್ಟ್ರಾಂಗ್ ಮೆಸೇಜ್ ಒಂದನ್ನು ನೀಡಿದ್ದಾರೆ. ಅದೇನೆಂದು ಇಲ್ಲಿ ನೋಡಿ.
ಎಲ್ಲಾ ಆಟಗಾರರೂ ಎಲ್ಲಾ ಮೂರೂ ಮಾದರಿಯ ಆಟ ಆಡಲು ತಯಾರಿರಬೇಕು. ಎಲ್ಲರಿಗೂ ತಂಡ ಮೊದಲು ವೈಯಕ್ತಿಕ ಹಿತಾಸಕ್ತಿ ನಂತರ ಎಂಬ ಭಾವನೆ ಇರಬೇಕು ಎಂದು ಗಂಭೀರ್ ಎಚ್ಚರಿಕೆ ನೀಡಿದ್ದಾರೆ. ಗಾಯ ಎನ್ನುವುದು ಎಲ್ಲಾ ಆಟಗಾರರ ಜೀವನದ ಭಾಗ. ಒಂದು ವೇಳೆ ನೀವು ಫಿಟ್ ಆಗಿದ್ದರೆ ಎಲ್ಲಾ ಮೂರೂ ಮಾದರಿ ಆಡಲು ತಯಾರಿರಬೇಕು ಎಂದು ಗಂಭೀರ್ ಖಡಕ್ ಸೂಚನೆ ನೀಡಿದ್ದಾರೆ.
ಇದಕ್ಕೆ ಮೊದಲು ದ್ರಾವಿಡ್ ಕೋಚ್ ಆಗಿದ್ದಾಗ ಮೂರೂ ಮಾದರಿಗೆ ವ್ಯತ್ಯಸ್ಥ ಆಟಗಾರರಿರುತ್ತಿದ್ದರು. ಕೆಲವರು ಟೆಸ್ಟ್ ಮಾದರಿ ಮಾತ್ರ ಆಡಿದರೆ, ಮತ್ತೆ ಕೆಲವರು ಸೀಮಿತ ಓವರ್ ಗಳಿಗೆ ಮಾತ್ರ ಎಂಬಂತಿದ್ದರು. ಆದರೆ ತಮ್ಮ ಕಾಲಾವಧಿಯಲ್ಲಿ ಇದೆಲ್ಲಾ ನಡೆಯದು ಎಂದು ಗಂಭೀರ್ ಈಗಾಗಲೇ ಸೂಚನೆ ನೀಡಿದ್ದಾರೆ.