ಕರಾಚಿ: 2025 ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಪಾಕಿಸ್ತಾನಕ್ಕೆ ಹೋಗಲು ಹಿಂದೇಟು ಹಾಕುತ್ತಿರುವ ಟೀಂ ಇಂಡಿಯಾಕ್ಕೆ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ವಿಶೇಷ ಆಹ್ವಾನ ನೀಡಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಯನ್ನು ವಿಶೇಷವಾಗಿ ಆಹ್ವಾನಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ 2025 ಪಾಕಿಸ್ತಾನದ ಆತಿಥ್ಯದಲ್ಲಿ ಪಾಕಿಸ್ತಾನದಲ್ಲೇ ನಡೆಯುತ್ತಿದೆ. ಆದರೆ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಕಳುಹಿಸಲು ಬಿಸಿಸಿಐ ಹಿಂದೇಟು ಹಾಕುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಸಿಗುವುದೂ ಕಷ್ಟ. ಇದರ ನಡುವೆ ಶಾಹಿದ್ ಅಫ್ರಿದಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ್ದಾರೆ.
ನಾನು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಆಹ್ವಾನಿಸುತ್ತಿದ್ದೇನೆ. ಪಾಕಿಸ್ತಾನ ಭಾರತಕ್ಕೆ ಹೋಗಿದ್ದಾಗ ನಮಗೆ ಸಾಕಷ್ಟು ಗೌರವ ಸಿಕ್ಕಿತ್ತು. 2005 ರಲ್ಲಿ ಭಾರತಕ್ಕೆ ಹೋಗಿದ್ದಾಗ ಸಾಕಷ್ಟು ಜನರ ಪ್ರೀತಿ ನಮಗೆ ಸಿಕ್ಕಿತ್ತು. ಕ್ರೀಡೆ ರಾಜಕೀಯದ ಹೊರತಾಗಿರಬೇಕು. ಎರಡೂ ತಂಡಗಳು ಆಡದೇ ಇರಲು ರಾಜಕೀಯವೇ ಕಾರಣ. ಭಾರತ ತಂಡ ಪಾಕಿಸ್ತಾನಕ್ಕೆ ಬರುವುದು, ಪಾಕಿಸ್ತಾನ ತಂಡ ಭಾರತಕ್ಕೆ ಹೋಗುವುದಕ್ಕಿಂತ ಸುಂದರ ಕ್ಷಣ ಇನ್ನೇನಿದೆ ಎಂದಿದ್ದಾರೆ.
ಅಷ್ಟೇ ಅಲ್ಲದೆ, ವಿರಾಟ್ ಕೊಹ್ಲಿಗೆ ಪಾಕಿಸ್ತಾನದಲ್ಲಿ ಸಿಗಬಹುದಾದ ಪ್ರೀತಿ ಬಗ್ಗೆ ವಿಶೇಷವಾಗಿ ಹೇಳಿಕೊಂಡಿದ್ದಾರೆ. ಪಾಕಿಸ್ತಾನಕ್ಕೆ ಬಂದರೆ ವಿರಾಟ್ ಕೊಹ್ಲಿಗೆ ಭಾರತದಲ್ಲಿ ತನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದೂ ಮರೆತು ಹೋಗಬಹುದು. ಅಷ್ಟರ ಮಟ್ಟಿಗೆ ಇಲ್ಲಿಯ ಜನ ಅವರನ್ನು ಪ್ರೀತಿಸುತ್ತಾರೆ. ಆತ ನನ್ನ ಫೇವರಿಟ್ ಕ್ರಿಕೆಟಿಗ. ಆತ ಟಿ20 ಕ್ರಿಕೆಟ್ ನಿಂದ ನಿವೃತ್ತಿಯಾಗಬಾರದಿತ್ತು ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.