ಭಾರತ-ಆಸೀಸ್ ಟಿ20: ಮತ್ತೆ ಬೆಸ್ಟ್ ಫಿನಿಶರ್ ಎಂದು ಸಾಬೀತುಪಡಿಸಿದ ರಿಂಕು ಸಿಂಗ್
ಶುಕ್ರವಾರ, 24 ನವೆಂಬರ್ 2023 (08:20 IST)
Photo Courtesy: Twitter
ವಿಶಾಖಪಟ್ಟಣಂ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ ಕೊನೆಯ ಓವರ್ ನ ಥ್ರಿಲ್ಲರ್ ನಲ್ಲಿ 2 ವಿಕೆಟ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಜೈಸ್ವಾಲ್-ಋತುರಾಜ್ ಸ್ಪೋಟಕ ಆರಂಭ ನೀಡುವ ಸೂಚನೆ ನೀಡಿದರು. ಆದರೆ ದುರದೃಷ್ಟವಶಾತ್ ಜೈಸ್ವಾಲ್ ಉಳಿಸಲು ಹೋಗಿ ಋತುರಾಜ್ ಒಂದೇ ಒಂದು ಎಸೆತ ಎದುರಿಸುವ ಮೊದಲೇ ರನೌಟ್ ಆಗಿ ನಿರ್ಗಮಿಸಬೇಕಾಯಿತು.
ಬಳಿಕ ಜೊತೆಯಾದ ಇಶಾನ್ ಕಿಶನ್-ಸೂರ್ಯಕುಮಾರ್ ಜೋಡಿ ಮೊದಲ 10 ಓವರ್ ನಲ್ಲಿ ತಂಡದ ಮೊತ್ತ 100 ರ ಗಡಿ ದಾಟಿಸಿದರು. ಈ ವೇಳೆ ಇಶಾನ್ 58 ರನ್ ಗಳಿಸಿದ್ದಾಗ ಕ್ಯಾಚ್ ಔಟ್ ಆದರು. ಇನ್ನೊಂದೆಡೆ ಅಬ್ಬರಿಸುತ್ತಿದ್ದ ಸೂರ್ಯಕುಮಾರ್ ಯಾದವ್ ಗೆಲುವಿನ ಸನಿಹದಲ್ಲಿದ್ದಾಗ 80 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
ಕೊನೆಯ ಓವರ್ ನಲ್ಲಿ ಭಾರತಕ್ಕೆ 6 ಎಸೆತಗಳಿಂದ 7 ರನ್ ಬೇಕಾಗಿತ್ತು. ಅಕ್ಸರ್ ಪಟೇಲ್ ಮತ್ತು ರಿಂಕು ಸಿಂಗ್ ಕ್ರೀಸ್ ನಲ್ಲಿದ್ದರು. ಭಾರತ ಸುಲಭವಾಗಿ ಗೆಲ್ಲಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಅದರಂತೇ ಮೊದಲ ಎಸೆತವನ್ನು ಬೌಂಡರಿಗಟ್ಟಿದ ರಿಂಕು ಸಿಂಗ್ ಎರಡನೇ ಎಸೆತದಲ್ಲಿ ಒಂದು ರನ್ ಗಳಿಸಿದರು. ಆಗ ತಂಡಕ್ಕೆ ನಾಲ್ಕು ಎಸೆತಗಳಿಂದ ಕೇವಲ 2 ರನ್ ಬೇಕಾಗಿತ್ತು. ಆದರೆ ನಂತರ ನಡೆದಿದ್ದು ನಾಟಕೀಯ ಬೆಳವಣಿಗೆ.
ಮುಂದಿನ ಮೂರು ಎಸೆತಗಳಲ್ಲಿ ಅಕ್ಸರ್ ಪಟೇಲ್ ಮತ್ತು ರವಿ ಬಿಷ್ಣೋಯ್, ಅರ್ಷ್ ದೀಪ್ ಸಿಂಗ್ ಔಟಾದಾಗ ಟೆನ್ ಷನ್ ಶುರುವಾಗಿತ್ತು. ಆದರೆ ಐದನೇ ಎಸೆತದಲ್ಲಿ ರಿಂಕು ಸಿಂಗ್ ಕ್ರೀಸ್ ನಲ್ಲಿದ್ದರು. ಆ ಎಸೆತವನ್ನು ಅವರು ಸಿಕ್ಸರ್ ಗಟ್ಟಿದ್ದರು. ಆದರೆ ಅದೇ ಎಸೆತವನ್ನು ಅಂಪಾಯರ್ ನೋ ಬಾಲ್ ಎಂದು ಘೋಷಿಸಿದ್ದರಿಂದ ಸಿಕ್ಸರ್ ಗೆ ಮಾನ್ಯತೆ ಇಲ್ಲದೇ ಹೋಯಿತು. ಆದರೆ ಅಂತಿಮ ಎಸೆತವನ್ನು ಸಿಕ್ಸರ್ ಗಟ್ಟಿ ತಾನು ಉತ್ತಮ ಫಿನಿಶರ್ ಎಂಬುದನ್ನು ರಿಂಕು ಮತ್ತೆ ಸಾಬೀತುಪಡಿಸಿದರು. ಅಂತಿಮವಾಗಿ ಭಾರತ 19.5 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 209 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು.