ಪುಣೆ: ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋತಿದ್ದ ಭಾರತ ತಂಡವು ಎರಡನೇ ಪಂದ್ಯದಲ್ಲೂ ಕುಸಿತಕ್ಕೆ ಒಳಗಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ತಂಡ ಗಳಿಸಿದ್ದ 259 ರನ್ ಎದುರು ಕೇವಲ 156 ರನ್‌ಗೆ ಆಲೌಟ್ ಆಗುವ ಮೂಲಕ 103 ರನ್‌ಗಳ ಹಿನ್ನಡೆ ಕಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮುಗ್ಗರಿಸಿದ್ದ ಭಾರತದ ಬ್ಯಾಟರ್‌ಗಳು ಎರಡನೇ ಪಂದ್ಯದಲ್ಲೂ ನೀರಸ ಪ್ರದರ್ಶನ ತೋರಿದ್ದಾರೆ.
ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 11 ಓವರ್‌ಗಳಲ್ಲಿ 1 ವಿಕೆಟ್‌ಗೆ 16 ರನ್ ಗಳಿಸಿದ್ದ ಟೀಂ ಇಂಡಿಯಾ, ಎರಡನೇ ದಿನದಾಟದ ಆರಂಭದಲ್ಲೇ ಸ್ಪಿನ್ ದಾಳಿಗೆ ತತ್ತರಿಸಿತು.
ಅನುಭವಿ ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಮೂಡಿಸಿದರು. ರವೀಂದ್ರ ಜಡೇಜ (38 ರನ್), ಶುಭಮನ್ ಗಿಲ್ (30 ರನ್), ಯಶಸ್ವಿ ಜೈಸ್ವಾಲ್ (30 ರನ್), ರಿಷಭ್ ಪಂತ್ (18 ರನ್), ವಾಷಿಂಗ್ಟನ್ ಸುಂದರ್ (ಅಜೇಯ 18 ರನ್), ಸರ್ಫರಾಜ್ ಖಾನ್ (11 ರನ್), ರವಿಚಂದ್ರನ್ ಅಶ್ವಿನ್ (4 ರನ್) ಅವರ ಹಿಂದೆಯೇ ನಡೆದರು.
ತಿರುವು ಪಡೆಯುತ್ತಿದ್ದ ಪಿಚ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಮಿಚೇಲ್ ಸ್ಯಾಂಟ್ನರ್ 53 ರನ್ ನೀಡಿ 7 ವಿಕೆಟ್ ಪಡೆದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಜೀವನಶ್ರೇಷ್ಠ ಸಾಧನೆಯಾಯಿತು.