ಮೂರೂವರೆ ದಶಕಗಳ ಬಳಿಕ ಭಾರತದಲ್ಲಿ ಟೆಸ್ಟ್‌ ಪಂದ್ಯ ಗೆದ್ದ ಕಿವೀಸ್‌ ಪಡೆ

Sampriya

ಭಾನುವಾರ, 20 ಅಕ್ಟೋಬರ್ 2024 (13:04 IST)
Photo Courtesy X
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವು ಎಂಟು ವಿಕೆಟ್‌ಗಳಿಂದ ಭಾರತವನ್ನು ಮಣಿಸಿ ವಿಶೇಷ ದಾಖಲೆ ಬರೆಯಿತು.  36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್‌ ಪಂದ್ಯ ಗೆದ್ದ ಸಾಧನೆ ಮಾಡಿತು.

ಪಂದ್ಯದ ಕೊನೆಯ ದಿನವಾದ ಭಾನುವಾರ ಭಾರತ ನೀಡಿದ 107 ರನ್‌ಗಳ ಸುಲಭ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಇನ್ನೂ 8 ವಿಕೆಟ್‌ ಬಾಕಿ ಇರುವಂತೆಯೇ ಗೆಲುವು ಸಾಧಿಸಿತು.  ಎರಡನೇ ಇನಿಂಗ್ಸ್‌ನಲ್ಲೂ ರಚಿನ್‌ ರವೀಂದ್ರ (ಅಜೇಯ 39) ಹಾಗೂ ವಿಲ್‌ ಯಂಗ್‌ (ಅಜೇಯ 48) ಅವರು ಕಿವೀಸ್‌ ತಂಡಕ್ಕೆ ಆಸರೆಯಾದರು.  ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್‌ ತಂಡವು 1-0 ಮುನ್ನಡೆ ಪಡೆಯಿತು.

ಖಾತೆ ತೆರೆಯದಿದ್ದರೂ ವಿಕೆಟ್‌ ಕೊಡದೆ ನಾಲ್ಕನೇ ದಿನದಾಟ ಮುಗಿಸಿದ್ದ ಪ್ರವಾಸಿ ಪಡೆಗೆ, ವೇಗಿ ಜಸ್‌ಪ್ರಿತ್‌ ಬೂಮ್ರಾ 5ನೇ ದಿನದ ಆರಂಭದಲ್ಲೇ ಆಘಾತ ನೀಡಿದರು. 4 ಎಸೆತಗಳನ್ನು ಎದುರಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ನಾಯಕ ಟಾಮ್‌ ಲಥಾಮ್‌ ದಿನದ 2ನೇ ಎಸೆತದಲ್ಲೇ ಎಲ್‌ಬಿ ಬಲೆಗೆ ಬಿದ್ದರು.

ಇದರೊಂದಿಗೆ ಭಾರತ ಪಾಳಯದಲ್ಲಿ ನಿರೀಕ್ಷೆಗಳು ಗರಿಗೆದರಿದ್ದವು. ತಂಡದ ಮೊತ್ತ 35 ರನ್‌ ಆಗಿದ್ದಾಗ ಡೆವೋನ್‌ ಕಾನ್ವೇ (17 ರನ್‌) ಅವರನ್ನೂ ಪೆವಿಲಿಯನ್‌ಗೆ ಅಟ್ಟಿದ ಬೂಮ್ರಾ, ಆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದರು. ಆದರೆ, ರವೀಂದ್ರ ಮತ್ತು ಯಂಗ್‌ ಅದಕ್ಕೆ ಅವಕಾಶ ನೀಡಲಿಲ್ಲ. ಇವರಿಬ್ಬರು ಮುರಿಯದ 3ನೇ ವಿಕೆಟ್‌ ಜೊತೆಯಾಟದಲ್ಲಿ 72 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಎರಡನೇ ಟೆಸ್ಟ್‌ ಪಂದ್ಯವು ಪುಣೆಯಲ್ಲಿ ಇದೆ 24ರಿಂದ 28ರವರೆಗೆ ಮತ್ತು ಕೊನೆಯ ಪಂದ್ಯ ನ.1ರಿಂದ 5ರವರೆಗೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ