ಅಮೆರಿಕ: ಅಫ್ಗಾನಿಸ್ತಾನ ತಂಡವು ಟಿ20 ವಿಶ್ವಕಪ್‌ನ ಸೂಪರ್ ಎಂಟರ ಘಟ್ಟದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡುವ ಮೂಲಕ ದಾಖಲೆ ನಿರ್ಮಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಗನ್ ತಂಡದ ನೀಡಿದ್ದ 149 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಸೋಲಾಗಿದೆ. ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾವನ್ನು 21 ರನ್‌ಗಳಿಂದ ಸೋಲಿಸಿದೆ. ಈ ಮೂಲಕ ಏಕದಿನ ವಿಶ್ವಕಪ್‌ನ ಸೋಲಿಗೆ ಅಫ್ಗನ್ ತಂಡ ಮುಯ್ಯಿ ತೀರಿಸಿಕೊಂಡಿದೆ.
ಈ ಪಂದ್ಯವನ್ನು ಗೆಲ್ಲುವ ಮೂಲಕ ರಶೀದ್ ಖಾನ್ ಬಳಗವು ಸೆಮಿಫೈನಲ್‌ಗೆ ತಲುಪುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ, ಸುಲಭವಾಗಿ ಸೆಮಿಗೆ ಪ್ರವೇಶಿಸುವ ಕನಸು ಕಂಡಿದ್ದ ಆಸ್ಟ್ರೇಲಿಯಾಕ್ಕೆ ಭಾರೀ ನಿರಾಸೆಯಾಗಿದೆ. ಭಾರತ ವಿರುದ್ಧ ನಡೆಯುವ ಪಂದ್ಯವೇ ಆಸ್ಟ್ರೇಲಿಯಾಕ್ಕೆ ನಿರ್ಣಾಯಕವಾಗಿದೆ.
ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತ್ತು. ರಹಮಾನುಲ್ಲಾ ಗುರ್ಬಾಜ್ 49 ಎಸೆತಗಳಲ್ಲಿ 60 ರನ್ ಗಳಿಸಿದ್ದರು. ಇನ್ನು ಇಬ್ರಾಹಿಂ ಜದ್ರಾನ್ 48 ಎಸೆತಗಳಲ್ಲಿ 51 ರನ್ ಗಳಿಸಿದ್ದರು. ಈ ಪಂದ್ಯದಲ್ಲೂ ಪ್ಯಾಟ್ ಕಮ್ಮಿನ್ಸ್ ಹ್ಯಾಟ್ರಿಕ್ ವಿಕೆಟ್ ಪಡೆದರು.
ಆಸ್ಟ್ರೇಲಿಯಾ ತಂಡವು 149 ರನ್‌ಗಳಿಗೆ ಉತ್ತರವಾಗಿ 127 ರನ್ ಗಳಿಸಲಷ್ಟೇ ಶಕ್ತವಾಗಿದ್ದು 21 ರನ್‌ಗಳಿಂದ ಸೋಲು ಕಂಡಿದೆ. ಅಫ್ಘಾನಿಸ್ತಾನ ತಂಡದ ಪರ ಗುಲ್ಬದಿನ್ ನೈಬ್ ನಾಲ್ಕು ವಿಕೆಟ್ ಪಡೆದರೆ, ನವೀನ್ ಉಲ್ ಹಕ್ 3 ವಿಕೆಟ್ ಗಳಿಸಿದರು.