ಟ್ವಿಸ್ಟ್ ಕೊಟ್ಟ ಮೊಹಮ್ಮದ್ ಶಮಿ: ಸೂಪರ್ ಓವರ್ ನಲ್ಲಿ ಗೆದ್ದ ಟೀಂ ಇಂಡಿಯಾ

ಬುಧವಾರ, 29 ಜನವರಿ 2020 (16:23 IST)
ಹ್ಯಾಮಿಲ್ಟನ್: ಟಿ20 ಕ್ರಿಕೆಟ್ ಎಷ್ಟು ರೋಚಕ ಎನ್ನುವುದಕ್ಕೆ ಇಂದು ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಮೂರನೇ ಟಿ20 ಪಂದ್ಯ ಸಾಕ್ಷಿಯಾಯಿತು. ಅಂತಿಮ ಓವರ್ ನಲ್ಲಿ ನಡೆದ ಡ್ರಾಮಾ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿತು.


ಭಾರತ ನೀಡಿದ್ದ 180 ರನ್ ಗಳ ಗುರಿಯನ್ನು ನ್ಯೂಜಿಲೆಂಡ್ ಆರಾಮವಾಗಿ ಗುರಿ ತಲುಪಿತು ಎನ್ನುವಾಗ ಅಂತಿಮ ಓವರ್ ಎಸೆದ ಮೊಹಮ್ಮದ್ ಶಮಿ 95 ರನ್ ಗಳಿಸಿದ್ದ ಕೇನ್ ವಿಲಿಯಮ್ಸನ್ ವಿಕೆಟ್ ಸೇರಿದಂತೆ ಎರಡು ವಿಕೆಟ್ ಕಬಳಿಸಿದ್ದಲ್ಲದೆ, ರನ್ ಕೂಡಾ ನಿಯಂತ್ರಿಸಿದರು. ಅಂತಿಮ ಎಸೆತದಲ್ಲಿ 1 ಬಾಲ್ 1 ರನ್ ಎನ್ನುವ ಸ್ಥಿತಿಯಲ್ಲಿದ್ದಾಗ ರಾಸ್ ಟೇಲರ್ ವಿಕೆಟ್ ಕಬಳಿಸಿದ್ದು ಪಂದ್ಯ ಟೈ ಆಗುವಂತೆ ಮಾಡಿತು. ಇದರಿಂದಾಗಿ ಸೂಪರ್ ಓವರ್ ಮೂಲಕ ಪಂದ್ಯದ ಫಲಿತಾಂಶ ನಿರ್ಧರಿಸಲಾಯಿತು.

ಸೂಪರ್ ಓವರ್ ನಲ್ಲಿ ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ ಮತ್ತು ಮಾರ್ಟಿನ್ ಗುಪ್ಟಿಲ್ ಬ್ಯಾಟಿಂಗ್ ಗಿಳಿದರೆ ಭಾರತದ ಪರ ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಡೆಸಿದರು. ಅದರಂತೆ ಕಿವೀಸ್ ಭಾರತಕ್ಕೆ 18 ರನ್ ಗಳ ಗುರಿ ನೀಡಿತು. ಈ ಸಂದರ್ಭದಲ್ಲಿ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡಿದರು.  ಮೊದಲ ನಾಲ್ಕು ಎಸೆತದಲ್ಲಿ ಕೇವಲ ಏಳು ರನ್ ಬಂದಾಗ ಅಭಿಮಾನಿಗಳ ಟೆನ್ಷನ್ ಹೆಚ್ಚಾಗಿತ್ತು. ಆದರೆ ಕೊನೆಯ ಎಸೆತವನ್ನು ಸಿಕ್ಸರ್ ಗಟ್ಟಿದ ರೋಹಿತ್ ಭಾರತವನ್ನು ಕೊನೆಗೂ ಗೆಲುವಿನ ದಡ ಮುಟ್ಟಿಸಿದರಲ್ಲದೆ, ಸರಣಿ ಗೆಲುವು ಕೊಡಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ಭಾರತವನ್ನು 179 ರನ್ ಗಳಿಗೆ ನಿಯಂತ್ರಿಸಿತು. ಭಾರತದ ಪರ ರೋಹಿತ್ ಶರ್ಮಾ ಬಿರುಸಿನ 65, ವಿರಾಟ್ ಕೊಹ್ಲಿ 38 ಮತ್ತು ಕೆಎಲ್ ರಾಹುಲ್ 27 ರನ್ ಗಳಿಸಿದರು. ನಿಗದಿತ 20 ಓವರ್ ಗಳಲ್ಲಿ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ