WI vs AUS: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ಮೊತ್ತಕ್ಕೆ ಔಟಾದ ವೆಸ್ಟ್ ಇಂಡೀಸ್

Krishnaveni K

ಮಂಗಳವಾರ, 15 ಜುಲೈ 2025 (10:03 IST)
Photo Credit: X
ಜಮೈಕಾ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ತಂಡವೆಂಬ ಟೀಂ ಇಂಡಿಯಾದ ಅಪವಾದವನ್ನು ಇದೀಗ ವೆಸ್ಟ್ ಇಂಡೀಸ್ ತೊಡೆದು ಹಾಕಿದೆ. ಆಸ್ಟ್ರೇಲಿಯಾ ವಿರುದ್ಧ 27 ರನ್ ಗಳಿಗೆ ಆಲೌಟ್ ಆಗುವ ಮೂಲಕ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಮೊತ್ತಕ್ಕೆ ಆಲೌಟ್ ಆದ ತಂಡವೆಂಬ ಕುಖ್ಯಾತಿ ತನ್ನದಾಗಿಸಿಕೊಂಡಿದೆ.

ಆಸ್ಟ್ರೇಲಿಯಾ ವಿರುದ್ಧ ಜಮೈಕಾದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಾ 225 ರನ್ ಕಲೆ ಹಾಕಿದ್ದರೆ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ನಲ್ಲಿ 143 ರನ್ ಗಳಿಗೆ ಆಲೌಟ್ ಆಗಿತ್ತು.

ದ್ವಿತೀಯ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಕೇವಲ 121 ರನ್ ಗಳಿಗೆ ಆಲೌಟ್ ಆಯಿತು. ಆದರೆ ವಿಂಡೀಸ್ ಅದಕ್ಕಿಂತ ಹೀನಾಯ ಪ್ರದರ್ಶನ ನೀಡಿ ಕೇವಲ 27 ರನ್ ಗಳಿಗೆ ಆಲೌಟ್ ಆಗುವ ಮೂಲಕ ಹೊಸ ದಾಖಲೆ ಬರೆದಿದೆ. ಇದುವರೆಗೆ ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ದಾಖಲೆ ಟೀಂ ಇಂಡಿಯಾ ಹೆಸರಿನಲ್ಲಿತ್ತು. 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 36 ರನ್ ಗಳಿಸಿದ್ದು ಇದುವರೆಗಿನ ಕನಿಷ್ಠ ಮೊತ್ತವಾಗಿತ್ತು. ಆದರೆ ಅದನ್ನೀಗ ವೆಸ್ಟ್ ಇಂಡೀಸ್ ಅಳಿಸಿದೆ.

ಗೆಲ್ಲಲು 204 ರನ್ ಗಳ ಗುರಿ ಪಡೆದಿದ್ದ ವಿಂಡೀಸ್ 14.3 ಓವರ್ ಗಳಲ್ಲಿ 27 ರನ್ ಗಳಿಗೆ ಆಲೌಟ್ ಆಗಿದೆ. ವಿಂಡೀಸ್ ನ 7 ಬ್ಯಾಟಿಗರು ಶೂನ್ಯಕ್ಕೆ ಔಟಾಗಿದ್ದಾರೆ. ಜಸ್ಟಿನ್ ಗ್ರೀವ್ಸ್ 11 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್. ಆಸೀಸ್ ಇತರೆ ರೂಪದಲ್ಲಿ 6 ರನ್ ನೀಡಿತ್ತು. ಮಿಚೆಲ್ ಸ್ಟಾರ್ಕ್ 9 ರನ್ ನೀಡಿ 6 ವಿಕೆಟ್ ಉರುಳಿಸಿದರೆ ಬೊಲ್ಯಾಂಡ್ 2 ರನ್ ನೀಡಿ 3 ವಿಕೆಟ್ ಉರುಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ