IND vs ENG: ಟೀಂ ಇಂಡಿಯಾ ಸೋಲಿಗೆ ಈ ಮೂವರು ಆಟಗಾರರೇ ಕಾರಣ

Krishnaveni K

ಮಂಗಳವಾರ, 15 ಜುಲೈ 2025 (09:44 IST)
Photo Credit: X
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆಲುವಿನ ಹೊಸ್ತಿಲವರೆಗೆ ಬಂದು ಸೋತಿದ್ದು ಆಟಗಾರರ ಮತ್ತುಅಭಿಮಾನಿಗಳ ಹೃದಯ ಚೂರು ಮಾಡಿದೆ. ಈ ಸೋಲಿಗೆ ಈ ಮೂವರು ಆಟಗಾರರೇ ಕಾರಣ ಎನ್ನಬಹುದು.

ಒಂದು ತಂಡ ಗೆಲ್ಲಬೇಕಾದರೆ ಎಲ್ಲಾಆಟಗಾರರ ಕೊಡುಗೆ ಬೇಕು ಎನ್ನುವುದು ಸತ್ಯ. ಆದರೆ ಕೆಲವು ಆಟಗಾರರು ಸಂಕಷ್ಟ ಪರಿಸ್ಥಿತಿಯಲ್ಲಿ ನಿಂತು ಆಡಬೇಕಾಗುತ್ತದೆ. ಹಾಗಿದ್ದರೆ ಮಾತ್ರ ತಂಡ ಗೆಲ್ಲಲು ಸಾಧ್ಯ. ಆದರೆ ಈ ಪಂದ್ಯದಲ್ಲಿ ಬೌಲರ್ ಗಳ ಶ್ರಮನ್ನು ಬ್ಯಾಟಿಗರು ನೀರಿನಲ್ಲಿ ಹೋಮ ಮಾಡಿದಂತೆ ಮಾಡಿಬಿಟ್ಟರು.

ಈ ಪಂದ್ಯದ ಸೋಲಿಗೆ ಮುಖ್ಯವಾಗಿ ಯಶಸ್ವಿ ಜೈಸ್ವಾಲ್, ನಾಯಕ ಶುಭಮನ್ ಗಿಲ್ ಮತ್ತು ಕರುಣ್ ನಾಯರ್ ಕಳಪೆ ಆಟವೇ ಕಾರಣ ಎನ್ನಬಹುದು. ಈ ಮೂವರು ಆಟಗಾರರಲ್ಲಿ ಒಬ್ಬರು ನಿಂತು ಆಡುತ್ತಿದ್ದರೂ ತಂಡ ಗೆಲ್ಲುತ್ತಿತ್ತು. ಜಡೇಜಾ ಕೊನೆಯವರೆಗೂ ತನಗೆ ತಕ್ಕ ಜೊತೆಗಾರರಿಲ್ಲದೇ ಸೋತರು.

181 ಎಸೆತ ಎದುರಿಸಿ 61 ರನ್ ಗಳಿಸುವುದು ಸಾಮಾನ್ಯದ ಮಾತಲ್ಲ. ಅದೂ ಒಂದೆಡೆ ವಿಕೆಟ್ ಉರುಳುತ್ತಿದ್ದರೆ ಜಡೇಜಾ ಏಕಾಂಗಿಯಾಗಿ ಹೋರಾಡಿದರು. ಯಶಸ್ವಿ ಜೈಸ್ವಾಲ್ ಈ ಹಿಂದೆ ಎಷ್ಟೇ ಶತಕ ಗಳಿಸಿರಬಹುದು. ಆದರೆ ಈ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಅವರು ವಿಫಲರಾದರು. ನಾಯಕ ಶುಭಮನ್ ಗಿಲ್ ರದ್ದೂ ಇದೇ ಕತೆ. ಒಂದು ವೇಳೆ ಜೈಸ್ವಾಲ್ ವಿಕೆಟ್ ಆರಂಭದಲ್ಲೇ ಕಳೆದುಕೊಂಡಾಗ ಕರುಣ್ ನಾಯರ್ ಸ್ವಲ್ಪ ಹೊತ್ತು ನಿಂತು ಆಡಿದ್ದರೂ ಸಾಕಿತ್ತು. ಕೆಎಲ್ ರಾಹುಲ್ ಜೊತೆಗೂಡಿ 40-50 ರನ್ ಗಳಿಸಿದ್ದರೂ ತಂಡದ ಚಿತ್ರಣವೇ ಬದಲಾಗುತ್ತಿತ್ತು. ಪ್ರತೀ ಬಾರಿಯೂ ರಾಹುಲ್ ರನ್ನೇ ನೆಚ್ಚಿ ಕೂರಲು ಸಾಧ್ಯವಿಲ್ಲ.  ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ರಿಷಭ್ ಪಂತ್ ಆಡುತ್ತಾರೆ. ಆದರೆ ಈ ಪಂದ್ಯದಲ್ಲಿ ಕೈಗೆ ಗಾಯ ಮಾಡಿಕೊಂಡು ನೋವು ನಿವಾರಕ ನುಂಗಿ ಆಡುತ್ತಿದ್ದ ಅವರಿಂದ ಹೆಚ್ಚು ನಿರೀಕ್ಷೆ ಮಾಡಲು ಸಾಧ್ಯವಿರಲಿಲ್ಲ. ಒತ್ತಡದ ಸಂದರ್ಭದಲ್ಲಿ ಅನುಭವ ಸಹಾಯಕ್ಕೆ ಬರುತ್ತದೆ. ಜೈಸ್ವಾಲ್, ಗಿಲ್, ಕರುಣ್ ನಾಯರ್ ಗೆ ಇತರೆ ಆಟಗಾರರಿಗೆ ಹೋಲಿಸಿದರೆ ಅನುಭವವೂ ಇತ್ತು. ಅದನ್ನು ಅವರು ಇಲ್ಲಿ ಧಾರೆಯೆರೆದು ಆಡಬಹುದಿತ್ತು. ಬಹುಶಃ ಕರುಣ್  ಈ ಪಂದ್ಯದಲ್ಲಿ ಆಡಿದ್ದರೆ ಸದ್ಯಕ್ಕೆ ಅವರನ್ನು ತಂಡದಿಂದ ಕದಲಿಸಲೂ ಸಾಧ್ಯವಿರುತ್ತಿರಲಿಲ್ಲ. ಕೇವಲ ಟ್ವೀಟ್ ಮೂಲಕ ಇನ್ನೊಂದು ಅವಕಾಶ ಕೊಡು ಎಂದು ಕೇಳಿ ಅವಕಾಶ ಸಿಕ್ಕಾಗ ಬಳಸಿಕೊಳ್ಳದೇ ಇದ್ದಲ್ಲಿ ಏನು ಪ್ರಯೋಜನ?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ