ಹರಾರೆ: ಭಾರತ ಕ್ರಿಕೆಟ್ ತಂಡವು ಎಂಟು ವರ್ಷಗಳ ಬಳಿಕ ಜಿಂಬಾಬ್ವೆ ವಿರುದ್ಧ ಸೋಲು ಅನುಭವಿಸಿತು. ಶನಿವಾರ ನಡೆದ ಮೊದಲ ಟಿ 20 ಪಂದ್ಯದಲ್ಲಿ 13 ರನ್‌ಗಳಿಂದ ಪರಾಭವಗೊಂಡಿತು. ಭಾನುವಾರ ಎರಡನೇ ಪಂದ್ಯ ನಡೆಯಲಿದೆ.
ಆತಿಥೇಯ ತಂಡವು ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿತು. ಭಾರತ ತಂಡವು 2024ರಲ್ಲಿ ಟಿ20 ಮಾದರಿಯಲ್ಲಿ ಸೋತ ಮೊದಲ ಪಂದ್ಯ ಇದಾಗಿದೆ. ಜಿಂಬಾಬ್ವೆ ಎದುರು ಎಂಟು ವರ್ಷಗಳಿಂದ ಇದ್ದ ಅಜೇಯ ದಾಖಲೆಯೂ ಇದರೊಂದಿಗೆ ಮುರಿದುಬಿತ್ತು.
ಭಾರತ ತಂಡವು ಈಚೆಗಷ್ಟೇ ಟಿ20 ವಿಶ್ವಕಪ್ ಜಯಿಸಿತ್ತು. ಆದರೆ, ಆ ತಂಡದಲ್ಲಿ ಆಡಿದವರು ವಿಶ್ರಾಂತಿ ಪಡೆದಿದ್ದರಿಂದ ಉದಯೋನ್ಮುಖ ಆಟಗಾರರ ಬಳಗವನ್ನು ಜಿಂಬಾಬ್ವೆ ಪ್ರವಾಸಕ್ಕೆ ಕಳಿಸಲಾಗಿದೆ. ಆದರೆ, ಅನುಭವದ ಕೊರತೆ ಇರುವ ಜಿಂಬಾಬ್ವೆ ತಂಡದ ಎದುರು ಶುಭಮನ್ ಗಿಲ್ ನಾಯಕತ್ವದ ತಂಡವು ಪರದಾಡಿತು.
116 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡವನ್ನು 102 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಜಿಂಬಾಬ್ವೆಯ ನಾಯಕ, ಸ್ಪಿನ್ನರ್ ಸಿಕಂದರ್ ರಝಾ (25ಕ್ಕೆ3) ಮತ್ತು ವೇಗಿ ತೆಂದೈ ಚತಾರಾ (16ಕ್ಕೆ3) ಯಶಸ್ವಿಯಾದರು. ಜಿಂಬಾಬ್ವೆ ಆಟಗಾರರ ಫೀಲ್ಡಿಂಗ್ ಕೂಡ ಗಮನ ಸೆಳೆಯಿತು.