ಮಹಿಳಾ ವಿಶ್ವಕಪ್: ಒಂದು ನೋ ಬಾಲ್ ಭಾರತದ ಕನಸೇ ಭಗ್ನಗೊಳಿಸಿತು!
ಭಾನುವಾರ, 27 ಮಾರ್ಚ್ 2022 (16:34 IST)
ಕ್ರಿಸ್ಟ್ ಚರ್ಚ್: ದ.ಆಫ್ರಿಕಾ ವಿರುದ್ಧ ಇಂದು ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಕೊನೆಯ ಬಾಲ್ ನಲ್ಲಿ ಸೋತ ಭಾರತ ತಂಡದ ಸೆಮಿಫೈನಲ್ ಕನಸು ಭಗ್ನವಾಗಿದೆ.
ಇಂದಿನ ಪಂದ್ಯ ಗೆದ್ದರೆ ಭಾರತಕ್ಕೆ ಸೆಮಿಫೈನಲ್ ನಲ್ಲಿ ಆಡುವ ಅರ್ಹತೆ ಸಿಗುತ್ತಿತ್ತು. ಕೊನೆಯವರೆಗೂ ಈ ಆಸೆ ಜೀವಂತವಾಗಿಯೇ ಇತ್ತು. ಆದರೆ ರೋಚಕವಾಗಿ ಕೊನೆಗೊಂಡ ಕೊನೆಯ ಓವರ್ ನಲ್ಲಿ ದೀಪ್ತಿ ಶರ್ಮಾ ಎಸೆದ ಆ ಒಂದು ನೋ ಬಾಲ್ ಮಿಥಾಲಿ ಪಡೆ ವಿಶ್ವಕಪ್ ನಿಂದಲೇ ಹೊರಬೀಳುವಂತೆ ಮಾಡಿತು.
ಗೆಲುವಿಗೆ ಭಾರತ ನೀಡಿದ 276 ರನ್ ಗಳ ಗುರಿ ಬೆನ್ನತ್ತಿದ್ದ ದ.ಆಫ್ರಿಕಾ ಉತ್ತಮ ಬ್ಯಾಟಿಂಗ್ ನಡೆಸಿತು. ಹಾಗಿದ್ದರೂ ಕೊನೆಯ 10 ಓವರ್ ನಲ್ಲಿ ಬಾಲ್ ಮತ್ತು ರನ್ ನಡುವೆ ಸುಮಾರು 20 ರನ್ ಗಳ ವ್ಯತ್ಯಾಸವಿತ್ತು. ಹೀಗಾಗಿ ಭಾರತೀಯರು ಗೆಲ್ಲಬಹುದುಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು.
ಅಂತಿಮ ಓವರ್ ನಲ್ಲಿ 6 ಎಸೆತಗಳಿಂದ 7 ರನ್ ಬೇಕಾಗಿತ್ತು. ಈ ವೇಳೆ ದ್ವಿತೀಯ ಎಸೆತದಲ್ಲಿ ದೀಪ್ತಿ ಎದುರಾಳಿ ಆಟಗಾರ್ತಿ ಪ್ರೀಝ್ ವಿಕೆಟ್ ಪಡೆದರು. ಮೂರನೇ ಎಸೆತದಲ್ಲಿ ಕೇವಲ 1 ರನ್ ಬಂತು. ಕೊನೆಯ ಎರಡು ಎಸೆತಗಳಲ್ಲಿ 3 ರನ್ ಬೇಕಾಗಿತ್ತು. ನಾಲ್ಕನೇ ಎಸೆತದಲ್ಲಿ ದೀಪ್ತಿ ಮತ್ತೊಂದು ವಿಕೆಟ್ ಕಿತ್ತರು ಎಂದೇ ಎಲ್ಲರೂ ಸಂಭ್ರಮಿಸಿದ್ದರು. ಆದರೆ ಆ ಎಸೆತ ನೋ ಬಾಲ್ ಆಗಿತ್ತು. ಇದುವೇ ಟರ್ನಿಂಗ್ ಪಾಯಿಂಟ್ ಆಯಿತು. ಈ ಒಂದು ತಪ್ಪಿನಿಂದಾಗಿ ಆಫ್ರಿಕಾ ಕೊನೆಯ ಎಸೆತದಲ್ಲಿ 1 ರನ್ ಗಳಿಸಿ 3 ವಿಕೆಟ್ ಗಳ ರೋಚಕ ಗೆಲುವು ಕಂಡಿತು.