ಭಾರತ ಇದುವರೆಗೆ ನಡೆದ ಎಲ್ಲಾ ಪಂದ್ಯಗಳನ್ನೂ ಗೆದ್ದು ಟೂರ್ನಿಯಲ್ಲಿ ಅಜೇಯವಾಗಿ ಮುಂದುವರಿದಿದೆ. ಈ ಏಷ್ಯಾ ಕಪ್ ನಲ್ಲಿ ಹರ್ಮನ್ ಪ್ರೀತ್ ಕೌರ್ ಪ್ರಬಲ ತಂಡವಾಗಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಬಾಂಗ್ಲಾದೇಶ ಕೂಡಾ ಪೈಪೋಟಿ ಒಡ್ಡಬಲ್ಲದು. ಉಭಯ ದೇಶಗಳ ನಡುವಿನ ಸರಣಿಗಳಲ್ಲಿ ಭಾರತದ ವಿರುದ್ಧ ಬಾಂಗ್ಲಾದೇಶ ಮೇಲುಗೈ ಸಾಧಿಸಿದ್ದೂ ಇದೆ.
ಆದರೆ ಪ್ರಸಕ್ತ ಭಾರತ ತಂಡ ಭರ್ಜರಿ ಫಾರ್ಮ್ ನಲ್ಲಿರುವುದೇ ಪ್ಲಸ್ ಪಾಯಿಂಟ್. ಬ್ಯಾಟಿಂಗ್ ನಲ್ಲಿ ಶಫಾಲಿ ವರ್ಮ, ಸ್ಮೃತಿ ಮಂಧಾನಾ, ಹರ್ಮನ್ ಪ್ರೀತ್ ಕೌರ್, ಜೆಮಿಮಾ ಸೇರಿದಂತೆ ಪ್ರತಿಯೊಬ್ಬರೂ ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್ ನಲ್ಲೂ ರೇಣುಕಾ ಸಿಂಗ್, ದೀಪ್ತಿ ಶರ್ಮಾ ಸೇರಿದಂತೆ ಅತ್ಯುತ್ತಮ ಬಳಗವಿದೆ.
ಭಾರತದ ಈ ಬಲಾಢ್ಯ ಫಾರ್ಮ್ ಗೆ ಇಷ್ಟು ದಿನ ನಡೆದ ಪಂದ್ಯಗಳಲ್ಲಿ ಗೆದ್ದ ರೀತಿಯೇ ಸಾಕ್ಷಿ. ಎಲ್ಲಾ ಪಂದ್ಯಗಳಲ್ಲೂ ಎಲ್ಲಾ ಎದುರಾಳಿಗಳ ವಿರುದ್ಧವೂ ಭರ್ಜರಿ ಅಂತರದಿಂದಲೇ ಗೆಲ್ಲುತ್ತಾ ಬಂದಿರುವ ಭಾರತ ಇಂದಿನ ಪಂದ್ಯವನ್ನೂ ಗೆದ್ದು ಮತ್ತೊಮ್ಮೆ ಏಷ್ಯಾ ಕಪ್ ಫೈನಲ್ ಗೇರುವ ಉತ್ಸಾಹದಲ್ಲಿದೆ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಅಥವಾ ಹಾಟ್ ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.